ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾಬೋಧಿನೀ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿಗೆ ಹೊರಸಂಚಾರ ಮತ್ತು ಒಂದು ದಿನದ ಅಹೋರಾತ್ರಿ ಶಿಬಿರವನ್ನು ಮಾರ್ಚ್ 11 ಮತ್ತು 12ರಂದು ಹಮ್ಮಿಕೊಳ್ಳಲಾಗಿತ್ತು.
ಈ ಹೈಕಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ 73 ಸ್ಕೌಟ್ ಮತ್ತು 33 ಗೈಡ್ ವಿದ್ಯಾರ್ಥಿಗಳನ್ನು ನಾಲ್ಕು ಸ್ಕೌಟ್ ಪಟಾಲಂ ಹಾಗೂ 2 ಗೈಡ್ ಪಟಾಲಂಗಳಾಗಿ ವಿಂಗಡಿಸಿ, ಪ್ರತೀ 20 ನಿಮಿಷಕ್ಕೆ ಒಂದೊಂದು ಪಟಾಲಂನ್ನು ವನ ವಿದ್ಯಾ ಸಂಕೇತಗಳನ್ನು ಅನುಸರಿಸಿ ಸುಮಾರು ಎಂಟು ಕಿಲೋಮೀಟರ್ ದೂರ ದಾರಿ ಹುಡುಕುತ್ತಾ ಕಾಲ್ನಡಿಗೆಯಲ್ಲಿ ಸಂಚರಿಸುವಂತೆ ಕಳುಹಿಸಲಾಯಿತು. ಕೆರೆ, ತೋಡು, ತೋಟ, ಗುಡ್ಡ, ಕಾಡುಗಳ ನಡುವೆ ಯಾವುದೇ ಭಯವಿಲ್ಲದೇ ಅತಿ ಉತ್ಸಾಹದಿಂದ ದಾರಿಯನ್ನು ಅರಸುತ್ತಾ ನಡೆದರು. ದಾರಿಮಧ್ಯೆ ಪ್ರತಿ ತಂಡವು ಪ್ರತ್ಯೇಕವಾಗಿ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಸದಸ್ಯರಾದ ಪಿಜಿ ಎಸ್ಎನ್ ಪ್ರಸಾದ್ ಅವರ ಮನೆಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಳೆ ದಾಖಲೆ, ಹವಾಮಾನ ಮಾಪನಗಳ ಪ್ರಾತ್ಯಕ್ಷಿಕೆ ನೀಡಿ, ಮಾಹಿತಿ ಒದಗಿಸಿದರು.
6 ತಂಡಗಳು ಐದು ಕಿಲೋಮೀಟರ್ ದೂರದ ಕೋಟೆ ಶ್ರೀಸುಬ್ರಹ್ಮಣ್ಯ ದೇವಾಲಯವನ್ನು ಮಧ್ಯಾಹ್ನ 1:00ಗಂಟೆಯ ಮೊದಲಾಗಿ ತಲುಪಿದರು. ದೇವಾಲಯ ತಲುಪಿದ ಎಲ್ಲ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಕೋಟೆ ದೇವಾಲಯದ ಆನುವಂಶಿಕ ಅರ್ಚಕರಾದ ವಿ ಗೋಪಾಲಕೃಷ್ಣ ರವರು ಸ್ಥಳ ಸಾನ್ನಿಧ್ಯದ ಮಾಹಿತಿಯನ್ನು ಒದಗಿಸಿದರು. ಆಡಳಿತ ಮೊಕ್ತೇಸರರಾದ ಕೆದಿಲ ನರಸಿಂಹ ಭಟ್ ಹಾಗೂ ಮೊಕ್ತೇಸರರಾದ ಸೀತಾರಾಮ ಕೋಟೆ, ಪಿ ಜಿ ಎಸ್ ಎನ್ ಪ್ರಸಾದ್, ಶಿವಸುಬ್ರಹ್ಮಣ್ಯ ಕಾಳಿಕಜೆ, ಶಂಕರನಾರಾಯಣ ಹೆಬ್ಬಾರ್, ರವಿನಾರಾಯಣ ಶೇಡಿಕಜೆ, ಶ್ರೀಮತಿ ಮಾಲಿನಿ ಪ್ರಸಾದ್ ಉಪಸ್ಥಿತರಿದ್ದರು.
ದೇವಾಲಯದಲ್ಲಿ ಪ್ರಸಾದ ಭೋಜನ ಸ್ವೀಕರಿಸಿದ ಬಳಿಕ ಮಧ್ಯಾಹ್ನ 2.30 ರಿಂದ ಮತ್ತೆ ತಂಡವಹಿವಾಗಿ ವನವಿದ್ಯಾ ಸಂಕೇತಗಳನ್ನು ಅನುಸರಿಸಿ ಹೊರಸಂಚಾರ ಮುಂದುವರಿಯಿತು.
ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಸಂಜೆ 6 ಗಂಟೆಯ ಒಳಗೆ ಎಲ್ಲಾ ತಂಡಗಳು ಗಮ್ಯಸ್ಥಳವಾದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಠಾರವನ್ನು ಯಶಸ್ವಿಯಾಗಿ ತಲುಪಿದರು.
ಕಾಂಚೋಡು ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕೆ ಯವರು ಶಿಬಿರದ ಧ್ವಜವಂದನೆ ಯಲ್ಲಿ ಭಾಗವಹಿಸಿ, ಶುಭ ಹಾರೈಸಿದರು. ರಾತ್ರಿ ದೇವಳದ ವಠಾರದಲ್ಲಿ ರಾತ್ರಿ ವಾಸ್ತವ್ಯವಿದ್ದು, ಶಿಬಿರಾಗ್ನಿ ಕಾರ್ಯಕ್ರಮ ನಡೆಸಿದರು. ಬಾಳಿಲ ವಿದ್ಯಾಬೋಧಿನೀ ಸ್ಕೌಟ್ ದಳದ ಪ್ರಪ್ರಥಮ ರಾಷ್ಟ್ರಪತಿ ಸ್ಕೌಟ್ ವಿದ್ಯಾರ್ಥಿ ವೆಂಕಟಕೃಷ್ಣ ಗೌತಮ್ ಶಿಬಿರಾಗ್ನಿಯನ್ನು ಉದ್ಘಾಟಿಸಿ, ತನ್ನ ರಾಷ್ಟ್ರಪತಿ ಪದಕಾರ್ಜನೆಯ ಅನುಭವವನ್ನು ಹಂಚಿಕೊಂಡು ಶುಭ ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಸದಸ್ಯರಾದ ಯು ರಾಧಾಕೃಷ್ಣ ರಾವ್ “ಉತ್ತಮ ನಾಯಕತ್ವ, ಸಹಬಾಳ್ವೆ ಮುಂತಾದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸ್ಕೌಟ್ ಗೈಡ್ ಶಿಬಿರಗಳು ಸಹಕಾರಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಮುಗುಪ್ಪು ಕೂಸಪ್ಪ ಗೌಡ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಶುಭ ಹಾರೈಸಿದರು.
ವಿದ್ಯಾಬೋಧಿನೀ ಪ್ರೌಢಶಾಲೆಯ ಮುಖ್ಯಗುರುಗಳಾದ ಯಶೋಧರ ಎನ್, ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ವೈ ಬಿ ಸುಬ್ಬಯ್ಯ ಉಪಸ್ಥಿತರಿದ್ದರು. ಸ್ಕೌಟ್ ಶಿಕ್ಷಕ ಉದಯಕುಮಾರ್ ರೈ ಎಸ್ ಸ್ವಾಗತಿಸಿ, ಸ್ಕೌಟ್ ಶಿಕ್ಷಕ ವೆಂಕಟೇಶ್ ಕುಮಾರ್ ಯು ವಂದಿಸಿದ ಈ ಶಿಬಿರಾಗ್ನಿ ಕಾರ್ಯಕ್ರಮವನ್ನು ಸ್ಕೌಟ್ ಶಿಕ್ಷಕರಾದ ಅರವಿಂದ ಕೆ ಹಾಗೂ ಶಿವಪ್ರಸಾದ್ ಜಿ ಮತ್ತು ಗೈಡ್ಸ್ ಶಿಕ್ಷಕಿ ಸಹನಾ ಬಿ ಬಿ ನಿರೂಪಿಸಿದರು.
ಎಲ್ಲ ವಿದ್ಯಾರ್ಥಿಗಳು ಮರುದಿನ ಮುಂಜಾನೆ ದೇವಳದ ಸಭಾಂಗಣದಲ್ಲಿ ಸರ್ವಧರ್ಮ ಪ್ರಾರ್ಥನೆ ಮಾಡಿ, ಶ್ರೀ ದೇವರ ದರುಶನ ಪಡೆದು, ಧ್ವಜವಂದನೆ , ಬಳಿಕ ವಠಾರ ಶುಚಿಗೊಳಿಸಿ, ಧ್ವಜ ಅವರೋಹಣದ ನಂತರ ಅಲ್ಲಿಂದ ವಿರಮಿಸಿದರು.
ಶಿಬಿರದ ಸಂದರ್ಭದಲ್ಲಿ ವಿದ್ಯಾಬೋಧಿನಿ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್, ಸೋಮಶೇಖರ ನೇರಳ, ಶ್ರೀನಾಥ್ ರೈ ದೋಳ್ತೊಡಿ, ಕೆವಿ ಶರ್ಮ ಬಾಳಿಲ, ಶ್ರೀಮತಿ ಗಾಯತ್ರಿ ರಾಧಾಕೃಷ್ಣ ರಾವ್, ಗಂಗಾಧರ ಬಾಳಿಲ, ರಾಷ್ಟ್ರಪತಿ ಸ್ಕೌಟ್ ಅರುಣ್ ಕುಮಾರ್ ಕಾಂಚೋಡು, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಪೋಷಕರು ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.
ಸಂಜೆಯ ಉಪಹಾರ, ರಾತ್ರಿಯ ಪ್ರಸಾದ ಭೋಜನ, ಬೆಳಗಿನ ಉಪಹಾರವನ್ನು ಕಾಂಚೋಡು ದೇವಸ್ಥಾನದ ವತಿಯಿಂದ ಪ್ರಸಾದರೂಪದಲ್ಲಿ ಸ್ವೀಕರಿಸಲಾಯಿತು. ಪ್ರೌಢ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಈ ಕಾರ್ಯಕ್ರಮವನ್ನು ಸಂಯೋಜಿಸಿದರು. ಪ್ರೌಢ ಶಾಲಾ ಎಸ್ ಡಿಎಂಸಿ ಸದಸ್ಯೆ ಶ್ರೀಮತಿ ಜಾಹ್ನವಿ ಕಾಂಚೋಡು, ಪ್ರಾಥಮಿಕ ಶಾಲಾ ಎಸ್ ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ಸಹಕರಿಸಿದರು.