ಮಾ.13 ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಬೆಳ್ಳಾರೆ ಘಟಕದ ಮಹಿಳಾ ಗೃಹರಕ್ಷಕಿ ಅಶ್ವಿನಿ ಕುಂಟಿಕಾನ ಮೆಟಲ್ ಸಂಖ್ಯೆ 736, ಇವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಇವರು ಪ್ರಸ್ತುತ ಬೆಳ್ಳಾರೆ ಘಟಕದ ಗೃಹರಕ್ಷಕಿಯಾಗಿದ್ದು, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ಮಾಡಿರುತ್ತಾರೆ. ಇವರು ಮಾಡಿರುವ ಕರ್ತವ್ಯಗಳನ್ನು ಗುರುತಿಸಿ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಫಲಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಅಮ್ಮನಾಗಿ, ಸಹೋದರಿಯಾಗಿ, ಸೊಸೆಯಾಗಿ, ಪತ್ನಿಯಾಗಿ, ಮಗಳಾಗಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಮಹಿಳೆಯರು ಕೇವಲ ಮನೆಯಲ್ಲಿ ಮಾತ್ರವಲ್ಲದೆ ಹೊರಗೆಯೂ ದುಡಿಯುತ್ತಾರೆ. ಆದ್ದರಿಂದ ಮಹಿಳೆಯರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನವಿದೆ, ಮಹಿಳೆಯರನ್ನು ಗೌರವಿಸುವುದು ಪ್ರತಿಯೊಬ್ಬ ಪುರುಷರ ಕರ್ತವ್ಯ ಎಂದು ನುಡಿದರು. ಈ ಸಮಾರಂಭವು ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗ ಇದರ ಮುಖ್ಯೋಪಾಧ್ಯಾಯರಾದ ಶ್ರೀ ಮಾಯಿಲಪ್ಪ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ಇದೆ, ಮಹಿಳಾ ಗೃಹರಕ್ಷಕಿಯರು ಮನೆಯ ಕೆಲಸದ ಜೊತೆಗೆ ಸಮಾಜ ಸೇವೆ ಮಾಡುವುದು ಶ್ಲಾಘನೀಯ ಎಂದು ನುಡಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ವಸಂತ್ ಕುಮಾರ್, ಹಿರಿಯ ಗೃಹರಕ್ಷಕಿಯರಾದ ಲಿಂಗಮ್ಮ, ಕವಿತಾ ಎನ್, ಸುಮಿತ್ರ, ಸವಿತಾ ಟಿ, ಸರೋಜಿನಿ ಡಿ, ಮಮತಾ ಕೆ, ಸುನಿತಾ ರೈ, ಹಿರಿಯ ಗೃಹರಕ್ಷಕರಾದ ಹೂವಪ್ಪ, ಪ್ರಭಾಕರ್ ನಾಯಕ್, ರಾಮಚಂದ್ರ ಪಿ, ನಾರಾಯಣ ಮಣಿಯಾಣಿ, ಪದ್ಮನಾಭ, ಕೇಶವ ಪಿ ಮುಂತಾದವರು ಉಪಸ್ಥಿತರಿದ್ದರು.