ಪುತ್ತೂರು : ಚಿನ್ನಾಭರಣಗಳ ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸ ಮತ್ತು ಪ್ರೀತಿಗೆ ಪಾತ್ರವಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮುಡಿಗೆ ಇನ್ನೊಂದು ಪ್ರಶಸ್ತಿ ಕಿರೀಟ ಮುಡಿಗೇರಿದೆ. ಕರ್ನಾಟಕ ಸ್ಟೇಟ್ ಜ್ಯುವೆಲ್ಲರ್ಸ್ ಫೆಡರೇಶನ್ (ಕೆ.ಜೆ.ಎಫ್.) ಕೊಡಮಾಡುವ ‘ಬೆಸ್ಟ್ ಜ್ಯುವೆಲ್ಲರಿ ರಿಟೈಲ್ ಸ್ಟೋರ್, ಕರ್ನಾಟಕ ಪ್ರಶಸ್ತಿಗೆ ಪಾತ್ರವಾಗಿದ್ದು, ಮಲ್ಟಿಪಲ್ ಸ್ಟೋರ್ ವಿಭಾಗದಲ್ಲಿ ರಾಜ್ಯದ ಬೆಸ್ಟ್ ಜ್ಯುವೆಲ್ಲರಿ ಎಂಬ ಹೆಗ್ಗಳಿಕೆಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪಾತ್ರವಾಗಿದೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿರುವ ‘ವೈಟ್ ಪೆಟಲ್ಸ್’ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಬೃಹತ್ ಮತ್ತು ಸಣ್ಣ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು, ಕರ್ನಾಟಕ ಜ್ಯುವೆಲ್ಲರ್ ಫೆಡರೇಶನ್ ಅಧ್ಯಕ್ಷರಾಗಿರುವ ಜಯ ಆಚಾರ್ಯ, ಕಾರ್ಯದರ್ಶಿ ದಿವಾಕರ ವಾಲೆಟ್ಟಿ, ಆರ್ಟ್ ಆಫ್ ಜ್ಯುವೆಲ್ಲರಿ ಸಂಸ್ಥೆಯ ಮುಖ್ಯಸ್ಥರಾಗಿರುವ ಸುಮೇಶ್ ವಧೇರಾ ಅವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ ಹಾಗೂ ಶ್ರೀಮತಿ ರಾಜಿ ಬಲರಾಮ ಆಚಾರ್ಯ ಸ್ವೀಕರಿಸಿದರು.
ವಿಶೇಷವೆಂದರೆ ಕೆ.ಜೆ.ಎಫ್. ಈ ವರ್ಷ ಪ್ರಾರಂಭಿಸಿರುವ ಈ ಪ್ರಶಸ್ತಿಯು ಚೊಚ್ಚಲ ಪ್ರಯತ್ನದಲ್ಲೇ ಜಿ.ಎಲ್, ಆಚಾರ್ಯ ಜ್ಯುವೆಲ್ಲರ್ಸ್ ಪಾಲಾಗಿರುವುದು ವಿಶೇಷವಾಗಿದೆ.
ಕನ್ನಡ ನಾಡಿನ ಚಿನ್ನದ ಸಂಸ್ಥೆಗಳ ನಡುವಿನ ಸ್ಪರ್ಧೆಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗೆದ್ದುಕೊಂಡಿದೆ.
ಕೆ.ಜೆ.ಎಫ್. ಈ ಒಂದು ವಿಶೇಷ ಸ್ಪರ್ಧೆಯನ್ನು ಕಾರ್ಪೊರೇಟ್ ಚಿನ್ನಾಭರಣ ಮಳಿಗೆಗಳನ್ನು ಹೊರತುಪಡಿಸಿ ನಮ್ಮ ರಾಜ್ಯದಲ್ಲೇ ಪ್ರಾರಂಭಗೊಂಡು ವ್ಯವಹಾರ ನಡೆಸುತ್ತಿರುವ ಚಿನ್ನಾಭರಣ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಿತ್ತು. ಈ ಹಿನ್ನಲೆಯಲ್ಲಿ ಮಲ್ಟಿಪಲ್ ಸ್ಟೋರ್ ವಿಭಾಗದಲ್ಲಿ ಸುಮಾರು 73 ಪ್ರಮುಖ ಚಿನ್ನಾಭರಣ ವಹಿವಾಟು ಸಂಸ್ಥೆಗಳು ಭಾಗವಹಿಸಿದ್ದವು. ಇವುಗಳಲ್ಲಿ, ಮಲ್ಟಿಪಲ್ ಸ್ಟೋರ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಈ ಚೊಚ್ಚಲ ಪ್ರಶಸ್ತಿಗೆ ಭಾಜನರಾದ ಹಿರಿಮೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಬಲರಾಮ ಆಚಾರ್ಯ ತಿಳಿಸಿದ್ದಾರೆ.
ಕೆ.ಜೆ.ಎಫ್. ರಾಜ್ಯದ ಚಿನ್ನಾಭರಣ ವಹಿವಾಟು ಸಂಸ್ಥೆಗಳಿಗಾಗಿ, ಸಿಂಗಲ್ ಸ್ಟೋರ್, ಲೇಡಿ ಎಂಟ್ರಪ್ರೆನ್ಯೂರ್, ಯಂಗ್ ಎಂಟ್ರಪ್ರೆನ್ಯೂರ್, ಬೆಸ್ಟ್ ಹೆರಿಟೇಜ್ ಕಲೆಕ್ಷನ್ ಸೇರಿದಂತೆ ಒಟ್ಟು 08 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಇದರಲ್ಲಿ ರಿಟೇಲ್ ವ್ಯವಹಾರ ವಿಭಾಗದಲ್ಲಿ ಜಿ.ಎಲ್. ಸಂಸ್ಥೆ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿ ಬಂದಿರುವ ಕೆ.ಜೆ.ಎಫ್.ನ ಒಂಬತ್ತು ಮಂದಿ ನಿರ್ದೇಶಕರು ಈ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಸಂಸ್ಥೆಯ ಮಾಹಿತಿ, ಪೂರ್ವಾಪರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತೀರ್ಪುಗಾರರು ತಮ್ಮ ತೀರ್ಪನ್ನು ನೀಡಿದ್ದಾರೆ.
- Tuesday
- December 3rd, 2024