Ad Widget

ಮಾನಸಿಕ‌ ಖಿನ್ನತೆ, ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ ಕೊರೊನಾ- ಬಲಿಯಾಗುತ್ತಿದ್ದಾರೆ ಶಂಕಿತರು, ಸೋಂಕಿತರು

. . . . . . .


ಕೊರೋನಾ ವೈರಸ್ ಕೇವಲ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರಿ ಸಾವು ತರುತ್ತಿಲ್ಲ. ಬದಲಾಗಿ ಮನಸ್ಸಿನ ಮೇಲೂ ಪರಿಣಾಮ ಬೀರಿ ಅಪಾಯಕಾರಿಯಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೊರೋನಾ ಸೋಂಕು ತಗುಲಿದೆ ಎಂಬ ಆತಂಕದಲ್ಲೇ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಹಾಗೂ ಬೀದರ್ ನಲ್ಲಿ ಯುವಕರು ಆತ್ಮಹತ್ಯೆಗೆ ಶರಣಾಗಿದ್ದು ಕೊರೋನಾ ಹೇಗೆ ಮಾನಸಿಕವಾಗಿ ಜನರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ತೋರಿಸಿದೆ.

ಭಾರತದಲ್ಲಿ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ವಲಸೆ ಕಾರ್ಮಿಕರಿಗಾಗಿ ಶ್ರಮಿಕ್​ ರೈಲು ಬಿಟ್ಟಿದ್ದು, ಲಾಕ್​ಡೌನ್​ ಇದ್ದರೂ ಎಲ್ಲಾ ವ್ಯವಹಾರಗಳಿಗೆ ಅವಕಾಶ ಕೊಟ್ಟು ಸಾಮಾಜಿಕ ಅಂತರ ಎನ್ನುವ ಪರಿಕಲ್ಪನೆಗೆ ಕಲ್ಲು ಹೊಡೆದಿದ್ದು ಸೇರಿದಂತೆ ಸರ್ಕಾರ ಕೈಗೊಂಡ ಗೊಂದಲಕಾರಿ ಕಾನೂನಿಂದಲೇ ಕೊರೊನಾ ಸೋಂಕು ಹೆಚ್ಚಳವಾಗುತ್ತಾ ಸಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ರುದ್ರ ನರ್ತನ ಮಾಡುತ್ತಿದ್ದು, ಭಾರತದಲ್ಲಿ ಪ್ರತಿದಿನ 6 ಸಾವಿರ ಗಡಿ ದಾಟುತ್ತಲೇ ಇದೆ. ನಿನ್ನೆ ಒಂದೇ ದಿನ‌ 6,535 ಜನರಲ್ಲಿ‌ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷದ 45 ಸಾವಿರದ 380ಕ್ಕೆ ಏರಿಕೆ ಆಗಿದೆ. ನಿನ್ನೆ ಒಂದೇ ದಿನ‌ ಕೊರೊನಾದಿಂದ 146 ಜನ‌ರು ಸಾವನ್ನಪ್ಪಿದ್ದು, ಸಾವಿರ ಸಂಖ್ಯೆ 4 ಸಾವಿರ ದಾಟಿದ 4,167ಕ್ಕೆ ಬಂದು ನಿಂತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೊನಾದಿಂದ ಸಾವಿನ ಸಂಖ್ಯೆ ಏರುತ್ತಿದೆ ಎನ್ನುವುದು ಸತ್ಯ. ಸೋಂಕಿತರು ಹೆಚ್ಚಾಗುತ್ತಿದ್ದಂತೆ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಏರಿಕೆ ಆಗುತ್ತಿರುವುದು ಸರ್ವೇ ಸಾಮಾನ್ಯ. ಆದರೆ ಜನರು ಕೊರೊನಾ ವಿರುದ್ಧ ಹೋರಾಟ ಮಾಡಿ ಗೆದ್ದು ಬರುವ ಮನಸ್ಸು ಮಾಡುತ್ತಿದೆ. ಇದು ಸಾವಿನ ಗ್ರಾಫ್​ ನೋಡಿದರೆ ಗೊತ್ತಾಗುತ್ತದೆ. ಶೇಕಡವಾರು ಸಾವಿನ ಸರಾಸರಿಯಲ್ಲಿ ಭಾರತ ಶೇಕಡವಾರು ಇಳಿಕೆಯಾಗುತ್ತಿದೆ. ಈ ಮೊದಲು ಕೊರೊನಾ ಆರಂಭದಲ್ಲಿ ಶೇಕಡ 19ರಷ್ಟಿದ್ದ ಸಾವಿನ ಸಂಖ್ಯೆ, ಇದೀಗ ಶೇಕಡ 6ಕ್ಕೆ ಇಳಿಕೆಯಾಗಿರುವುದು ಸಮಾಧಾನ ತಂದಿದೆ. ಆದರೆ ಕೊರೊನಾದಿಂದ ಸಾವನ್ನಪ್ಪುವ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ನೆಮ್ಮದಿ ಜೊತೆಗೆ ಜನರು ಮಾನಸಿಕ ಕಾಯಿಲೆಗೆ ಬಲಿಯಾಗುತ್ತಿದ್ದಾರೇ..? ಎನ್ನುವ ಅನುಮಾನವನ್ನು ಕರ್ನಾಟಕದ ಪ್ರಕರಣಗಳೇ ಸೃಷ್ಟಿಸುತ್ತಿದೆ.

ಹಾಸನದ ಚನ್ನರಾಯಪಟ್ಟಣಕ್ಕೆ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್​ ಕೇಂದ್ರಕ್ಕೆ ಕರೆದೊಯ್ದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಳಿಕ ಉಡುಪಿಯಲ್ಲಿ ಸಾರಿಗೆ ಸಿಬ್ಬಂದಿ ಒಬ್ಬರು ಕ್ವಾರಂಟೈನ್​ಗೆ ಹೋಗಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದರು. ದಾವಣಗೆರೆಯಲ್ಲೂ ಸಕ್ಕರೆ ಕಾಯಿಲೆ ಹೊಂದಿದ್ದ ವ್ಯಕ್ತಿಯನ್ನು ಕ್ವಾರಂಟೈನ್​ಗೆ ಒಳಪಡಿಸಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಇಂದು ವರದಿ ಬಂದಿದ್ದು, ನೆಗಟೀವ್​ ರಿಪೋರ್ಟ್​ ಬಂದಿದೆ. ಚಿಕ್ಕಮಗಳೂರಿನಲ್ಲೂ ಮೂಲವ್ಯಾಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಶೀತ, ನೆಗಡಿ, ಕ್ಕೆಮ್ಮು ಬಂದಿದ್ದರಿಂದ ಕ್ವಾರಂಟೈನ್​ ಕೇಂದ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ತನಕ ವರದಿ ಕೂಡ ನೆಗೆಟಿವ್ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಟ್ಟಡದ ಮೇಲಿನಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿದ್ದರು. ಬೀದರ್​ನಲ್ಲಿ ಇಂದು ಕ್ವಾರಂಟೈನ್ ಕೇಂದ್ರಲ್ಲಿ ನೇಣು ಬಿಗಿದುಕೊಂಡು 25 ವರ್ಷದ ಯುವಕನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ ಯುವಕ, ನಾರಾಯಣಪುರ ಗ್ರಾಮದ ಸಚಿನ್ ಟಾಯ್ಲೆಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಟ್ಟಾರೆ, ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಆದರೆ ಜನರನು ಕೊರೊನಾ ಎಂಬ ಪೆಡಂಭೂತಕ್ಕೆ ಬೆದರಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಕ್ವಾರಂಟೈನ್​ ಕೇಂದ್ರಲ್ಲೇ ಸಾವಿನತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಬಂದು ಸಾಯುವ ಬದಲು ಕೊರೊನಾ ಭಯದಲ್ಲೇ ಜನರು ಸಾಯುವಂತಾಗಿದೆ. ಸರ್ಕಾರ ಮನೋ ವೈದ್ಯರನ್ನು ಕ್ವಾರಂಟೈನ್​ ಕೇಂದ್ರಗಳಿಗೆ ನಿಯೋಜನೆ ಮಾಡುವ ಮೂಲಕ ಜನರಲ್ಲಿ ಗುಣಮುಖ ಆಗುವ ವಿಶ್ವಾಸ ಮೂಡಿಸಬೇಕಿದೆ. ಇಲ್ಲದಿದ್ದರೆ ಕೊರೊನಾ ಸೋಂಕಿನಿಂದ ಸಾಯುವ ಬದಲು ಮನೋವ್ಯಾಧಿಯಿಂದ ಸಾಯುವ ಸಾಧ್ಯತೆ ಹೆಚ್ಚಾಗಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!