ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪೆರುವಾಜೆಯ ಜೆಡಿ ಆಡಿಟೋರಿಯಂನಲ್ಲಿ ಜರುಗಿತು.
ಸಭೆಯನ್ನು ಉದ್ದೇಶಿಸಿ
ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತಾಡುತ್ತ, “ಹಿಂದೆ ಪಂಚಾಯತ್ ಆಡಳಿತ ತೀರಾ ತಳಮಟ್ಟದಲ್ಲಿತ್ತು. ಪಂಚಾಯತ್ ನಲ್ಲಿ ನಿರ್ಣಯ ಪುಸ್ತಕಗಳಿರಲಿಲ್ಲ. ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್ ನಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಉದ್ದೇಶದಿಂದ ನಾನು ಪಂಚಾಯತ್ ಸದಸ್ಯನಾಗಿದ್ದ ಅಂದಿನ ಕಾಲದಿಂದ ಇಂದಿನವರೆಗೂ ಸಾಕಷ್ಟು ಶ್ರಮ ವಹಿಸಿ ದುಡಿದ ತೃಪ್ತಿ ನನಗಿದೆ. ಹಿಂದೆ ನಾನು ಸದಸ್ಯನಾಗಿದ್ದ ವೇಳೆ ಪಂಚಾಯತ್ ಸದಸ್ಯರಿಗೆ 250 ರೂ. ಗೌರವಧನ ನೀಡಲಾಗುತ್ತಿತ್ತು. ಅದೀಗ 1000 ರೂ. ಆಗಿದ್ದು ಮುಂದೆ 2000 ರೂಪಾಯಿಗೆ ಏರಿಕೆಯಾಗಲಿದೆ. ಕೋಟ ಶ್ರೀನಿವಾಸ್ ಪೂಜಾರಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರ್ಸಂಟೇಜ್ ವ್ಯವಹಾರ ಮಾಡಿದ್ದಾರೆ ಎಂದು ಯಾರಾದರೂ ಆರೋಪ ಮಾಡಿದ್ದರೆ ಮುಕ್ತ ಚರ್ಚೆಗೆ ನಾನು ಸಿದ್ಧನಿದ್ದೇನೆ. ರಸ್ತೆ ಕಾಮಗಾರಿಗೆ ಅನುದಾನವನ್ನು ಜಿಲ್ಲಾಧಿಕಾರಿ ಮೂಲಕವೇ ಬಿಡುಗಡೆ ಮಾಡಿದ್ದು ಎಲ್ಲೂ ಒಂದು ಕಪ್ ಚಹಾ ಕುಡಿದಿಲ್ಲ. ಇದೇ ಕಾರಣಕ್ಕೆ ಪಕ್ಷ ನನಗೆ ನಾಲ್ಕನೇ ಬಾರಿ ಚುನಾವಣೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದು ಮತ್ತೊಮ್ಮೆ ನಿಷ್ಠೆಯಿಂದ ಜನ ಸೇವೆ ಮಾಡಲು ಉತ್ಸುಕನಾಗಿದ್ದೇನೆ. ನಿಮ್ಮ ಅಮೂಲ್ಯ ಮತಗಳನ್ನು ಕೊಟ್ಟು ಪಕ್ಷದ ಗೆಲುವಿಗೆ ಸಹಕರಿಸಿ” ಎಂದರು.
ಮಾತಾಡಿದ ಸುಳ್ಯ ಶಾಸಕ ಎಸ್. ಅಂಗಾರ ಅವರು, “ವಿಧಾನ ಪರಿಷತ್ ಚುನಾವಣೆ ಬೇರೆ ಪಕ್ಷದವರಿಗೆ ನಮ್ಮ ಸಂಘಟನೆ, ಒಗ್ಗಟ್ಟು ತೋರಿಸುವ ಚುನಾವಣೆಯಾಗಿದೆ. ನಮ್ಮ ಅಮೂಲ್ಯ ಮತಗಳನ್ನು ಕಸಿಯಲು ವಿರೋಧಿಗಳು ಸಂಚು ಮಾಡುತ್ತಿದ್ದು ಅದನ್ನು ಮುರಿಯುವ ಕೆಲಸವನ್ನು ನಾವು ಮಾಡಬೇಕಾಗಿದೆ. ಈ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಮಾತ್ರ ಮತ ಚಲಾಯಿಸುವ ಹಕ್ಕಿದೆ. ಆದರೆ ಆ ಹಕ್ಕನ್ನು ಸರಿಯಾಗಿ ಚಲಾಯಿಸಿದಾಗ ಮಾತ್ರ ಅಭ್ಯರ್ಥಿ ವಿಜಯಿಯಾಗುವ ಜೊತೆಯಲ್ಲಿ ಪಕ್ಷದ ಗೆಲುವು ಸಾಧ್ಯವಾಗುತ್ತದೆ. ಕಳೆದ 60 ವರ್ಷಗಳಲ್ಲಿ ಏನೂ ಮಾಡದೇ ಸುಮ್ಮನಿದ್ದ ಕಾಂಗ್ರೆಸಿಗರು ನಮ್ಮ ಸರಕಾರ ನಡೆಸುತ್ತಿರುವ ಅಭಿವೃದ್ಧಿ ನೋಡಲಾಗದೆ ಕುತಂತ್ರ ಮುಂದುವರಿಸಿದ್ದಾರೆ. ಆದ್ದರಿಂದ ಒಂದೇ ಮತ ಚಲಾಯಿಸುವ ಅಧಿಕಾರವಿದ್ದು ಅದನ್ನು ನಮ್ಮ ಯೋಗ್ಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ನೀಡುವ ಮೂಲಕ ಬಹುಮತ ನೀಡಬೇಕು” ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, “ನರೇಂದ್ರ ಮೋದಿ ಆಡಳಿತದಲ್ಲಿ ಪಂಚಾಯತ್ ಗೆ ಕೇಂದ್ರದ ಅನೇಕ ಯೋಜನೆಗಳು ನೇರವಾಗಿ ಬರುತ್ತಿದ್ದು ಇದರಿಂದ ಪಂಚಾಯತ್ ಸದಸ್ಯರ ಗೌರವ ಹೆಚ್ಚಾಗಿದೆ. ಪಂಚಾಯತ್ ಗೆ ಆರ್ಥಿಕ ಚೈತನ್ಯ ದೊರೆತಿದೆ. ಇಂತಹ ಪಂಚಾಯತ್ ಸದಸ್ಯರ ಪರವಾಗಿ ಸದನದಲ್ಲಿ ನಿರಂತರ ಧ್ವನಿ ಎತ್ತುತ್ತಾ ಬಂದಿರುವ ಕೋಟ ಶ್ರೀನಿವಾಸ ಪೂಜಾರಿಯವರು ನಾಲ್ಕನೇ ಬಾರಿ ನಿಮ್ಮೆದುರು ಮತ ಕೇಳಲು ಬಂದಿದ್ದಾರೆ. ಅವರು ಗೆಲ್ಲುವುದು ಶತಸಿದ್ಧ. ಆದರೆ ಬಹುಮತ ದೊರಕಿಸಿಕೊಡುವ ಮೂಲಕ ಪಕ್ಷದ ಗೆಲುವಿಗೆ ನೀವು ಸಹಕರಿಸಬೇಕು. ನಿಮ್ಮ ಮತಗಳ ಜೊತೆಗೆ ಬೇರೆ ಪಕ್ಷಗಳಿಂದ ಮತಗಳನ್ನು ಸೆಳೆಯಲು ನೀವು ಪ್ರಯತ್ನ ಪಡಬೇಕು” ಎಂದರು
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಸಚಿವ ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪ್ರಸಾದ್ ಕುಮಾರ್, ರಾಧಾಕೃಷ್ಣ ಬೂಡಿಯಾರ್, ಹರೀಶ್ ಕಂಜಿಪಿಲಿ, ರಾಮದಾಸ್ ಬಂಟ್ವಾಳ, ಕಸ್ತೂರಿ ಪಂಜ, ಸುಳ್ಯ ಮಂಡಲ ಪ್ರಭಾರಿ ರಾಧಾಕೃಷ್ಣ, ಜಯಶ್ರೀ ಕರ್ಕೇರ, ಹರಿಯಪ್ಪ ಸಾಲಿಯಾನ್, ಮಂಗಳಾ ಆಚಾರ್ಯ, ಸತೀಶ್ ಕುಂಪಲ, ಜಯಂತ್ ನಾಯಕ್ ಪುತ್ತೂರು, ವೆಂಕಟ್ ವಳಲಂಬೆ, ದೇವದಾಸ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಹರಿಕೃಷ್ಣ ಬಂಟ್ವಾಳ, ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
- Saturday
- November 23rd, 2024