ಕೇರ್ಪಡದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವವು ಡಿ.14 ಹಾಗೂ ಡಿ.15ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಡಿ.14 ಮಂಗಳವಾರದಂದು ಬೆಳಿಗ್ಗೆ ಗಂಟೆ 7.30ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ| ಪುಣ್ಯಾಹವಾಚನ, ಮಹಾಗಣಪತಿ ಹೋಮ, ಚಂಡಿಕಾಯಾಗದ ಪ್ರಾರಂಭ, ಹಸಿರು ಹೊರೆಕಾಣಿಕೆ ಸಮರ್ಪಣೆ, ಬೆಳಿಗ್ಗೆ ಗಂಟೆ 8.30ಕ್ಕೆ ತೋರಣ ಮುಹೂರ್ತ, ಪೂರ್ವಾಹ್ನ ಗಂಟೆ 11.30ರಿಂದ ಚಂಡಿಕಾಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ಶ್ರೀ ದೇವಿಗೆ ದೊಡ್ಡ ರಂಗಪೂಜೆ ಹಾಗೂ ಮಹಾಪೂಜೆ, ರಾತ್ರಿ ಗಂಟೆ 8.00ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಬೆಡಿ ಪ್ರದರ್ಶನ ನಡೆಯಲಿದೆ.
ಡಿ.15 ಬುಧವಾರದಂದು ಬೆಳಿಗ್ಗೆ ಗಂಟೆ 7.00ಕ್ಕೆ ಮಹಾಗಣಪತಿ ಹೋಮ, ಕಲಶಪೂಜೆ, ಬೆಳಿಗ್ಗೆ ಗಂಟೆ 8.00ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಸಾಯಂಕಾಲ ಗಂಟೆ 4.00ಕ್ಕೆ ಕೇರ್ಪಡದ ಗೌಡ ಮನೆತನದ ಭಂಡಾರ ಮನೆಯಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ದೇವಸ್ಥಾನಕ್ಕೆ ಬಂದು ಸಂಜೆ ಗಂಟೆ 6.00ರಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳಾದ ಬಸವರಾಜು.ಬಿ ತಿಳಿಸಿದ್ದಾರೆ.