
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಡಿ.12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಹಲವು ಮತದಾರರಲ್ಲಿ ಗುರುತಿನ ಚೀಟಿ ಇಲ್ಲದಿರುವುದರಿಂದ ಎಲ್ಲಾ ಮತದಾರರಿಗೆ ಗುರುತಿನ ಚೀಟಿಯನ್ನು ಒದಗಿಸಲು ರಾಜ್ಯ ಒಕ್ಕಲಿಗರ ಸಂಘವು ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸದಸ್ಯತ್ವ ಮತ್ತು ಡಿಜಿಟಲ್ ಮಾದರಿಯಲ್ಲಿ ಗುರುತಿನ ಚೀಟಿ ದೊರೆಯುವಂತಾಗಬೇಕು ಎಂದು ಒಕ್ಕಲಿಗರ ಸಂಘದ ಚುನಾವಣೆಯ ಅಭ್ಯರ್ಥಿ ಹೇಮಾನಂದ ಹಲ್ಲಡ್ಕ ಹೇಳಿದ್ದಾರೆ.
ಅವರು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಹಲವಾರು ಮಂದಿ ಮತದಾರರಲ್ಲಿ ಗುರುತಿನ ಚೀಟಿ ಇಲ್ಲದ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾಗಿ ಗುರುತಿನ ಚೀಟಿ ಇಲ್ಲದೆ ಅನೇಕರು ಮತದಾನ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಚುನಾವಣೆಯೇ ಅಪ್ರಸ್ತುತವಾಗಬಹುದು. ಆದುದರಿಂದ ಒಕ್ಕಲಿಗರ ಸಂಘವು ಕೂಡಲೇ ಗುರುತಿನ ಚೀಟಿ ಒದಗಿಸಿ ಎಲ್ಲರೂ ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಹೇಳಿದರು.
ಈ ವಿಚಾರವಾಗಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಪರಿಹಾರ ನೀಡದೇ ಇದ್ದರೆ ಮುಂದಿನ ಕ್ರಮದ ಬಗ್ಗೆ ಯೋಚನೆ ನಡೆಸಲಾಗುವುದು ಎಂದರು. ಯಾವುದೇ ಸಂದರ್ಭದಲ್ಲೂ ಚುನಾವಣಾ ಸ್ಪರ್ಧೆಯಿಂದ ಹಿಂದೆ ಬರುವ ಪ್ರಶ್ನೆ ಇಲ್ಲ. ರಾಜ್ಯ ಒಕ್ಕಲಿಗರ ಸಂಘದಲ್ಲಿ ಬದಲಾವಣೆಯನ್ನು ಮತದಾರರು ಬಯಸಿದ್ದಾರೆ ಆದ್ದರಿಂದ ಪ್ರಚಾರಕ್ಕೆ ತೆರಳಿದ ಕಡೆಗಳಲ್ಲಿ ಉತ್ತಮ ಬೆಂಬಲ ಮತ್ತು ಪ್ರೋತ್ಸಾಹ ಸಿಕ್ಕಿದೆ ಎಂದು ಹೇಮಾನಂದ ಹಲ್ದಡ್ಕ ಹೇಳಿದರು. ಸಮುದಾಯದ ಅಭಿವೃದ್ಧಿಗೆ ನಿರಂತರ ಪ್ರಯತ್ನದ ಜೊತೆಗೆ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಮತ್ತು ಪ್ರತಿಭಾವಂತರಿಗೆ ಪ್ರೋತ್ಸಾಹ ದೊರೆಯುವಂತಾಗಬೇಕು ಎಂದು ಅವರು ಹೇಳಿದರು.
ಅರ್ಹತೆ ಇರುವ ಎಲ್ಲರಿಗೂ ಒಕ್ಕಲಿಗರ ಸಂಘದ ಸದಸ್ಯತ್ವ ನೀಡಲು ಸಂಘವು ಕ್ರಮ ಕೈಗೊಳ್ಳಬೇಕು. ಸಮುದಾಯದ ಜನರ ಅಭಿವೃದ್ಧಿಗೆ ನಿರಂತರವಾಗಿ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಮೇಶ್ ಪೆರಾಜೆ ಉಪಸ್ಥಿತರಿದ್ದರು.