ಕುಕ್ಕೆ ಸುಬ್ರಹ್ಮಣ್ಯದಲ್ಲಿ ನ.27 ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಸಂಭ್ರಮ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಭಾರತ ಸರ್ಕಾರದ ಸಾಮಾಜಿಕ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ “ನಮ್ಮ ಸಂವಿಧಾನ ಎಷ್ಟು ಚೆನ್ನಾಗಿದೆ ಎಂದರೆ ಅದಕ್ಕೆ ಯಾವ ದೇಶವೂ ಸಾಟಿಯಿಲ್ಲ. ಆದರೆ ನಮ್ಮಲ್ಲಿ ಸಂವಿಧಾನ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಕೆಲವೊಂದು ಕೇಸ್ ಗಳು 30 ವರ್ಷ ಕಳೆದರೂ ಜಡ್ಜ್ ಮೆಂಟ್ ಬರುತ್ತಿಲ್ಲ. ಹಾಗಾಗಿ ಸಂವಿಧಾನ ಇನ್ನಷ್ಟು ಸದೃಢವಾಗಿ ಅನುಷ್ಠಾನವಾಗಬೇಕಾಗಿದೆ. ಕರ್ನಾಟಕದಲ್ಲಿ ಸಮಾಜದ ಮೀಸಲಾತಿ ಹೋರಾಟಗಳು ದಿಕ್ಕು ತಪ್ಪಿಸುತ್ತಿವೆ. ಸಮಾಜದಲ್ಲಿ ಯಾವುದು ಮುಖ್ಯವೋ ಅದು ಆಗಬೇಕು. ಜಾಗೃತ ಸಮಾಜ ಒಟ್ಟು ವ್ಯವಸ್ಥೆಯಲ್ಲಿ ಕೆಟ್ಟ ವ್ಯವಸ್ಥೆಯನ್ನು ಬದಲಾಯಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ, ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರನ್ನು ಗೌರವಿಸಲಾಯಿತು.
ಯತೀಶ್ ಆರ್ವಾರ ಸ್ವಾಗತಿಸಿ, ಎಸ್.ಎಸ್.ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್ ವಂದಿಸಿದರು. ಕೆ.ಎಸ್.ಎಸ್ ಕಾಲೇಜಿನ ಉಪನ್ಯಾಸಕರುಗಳಾದ ಆರತಿ ಹಾಗೂ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಮುಖಂಡ ವೆಂಕಟ್ ದಂಬೆಕೋಡಿ ಹಾಗೂ ವಿದ್ಯಾರ್ಥಿಗಳಾದ ಸ್ವರಾಜ್, ಕೌಶಿಕ್, ಚುಂಚನಾ, ರಕ್ಷಿತಾ ಸಂವಾದದಲ್ಲಿ ಪಾಲ್ಗೊಂಡರು.
ವರದಿ :- ಉಲ್ಲಾಸ್ ಕಜ್ಜೋಡಿ