ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಿಬ್ಬಂದಿಗಳಾಗಿ ಹೊರಗಿನ ಜನರನ್ನು ನೇಮಕ ಮಾಡುತ್ತಿದ್ದು ಅದರಿಂದ ಸ್ಥಳೀಯ ವಿದ್ಯಾವಂತರು ನಿರುದ್ಯೋಗಕ್ಕೆ ಒಳಗಾಗಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪರಶುರಾಮ ಚಿಲ್ತಡ್ಕ ಒತ್ತಾಯಿಸಿದ್ದಾರೆ.
ಅವರು ನ.20ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ದೇವಸ್ಥಾನದ ವಿವಿಧ ಹುದ್ದೆಗಳಿಗೆ ಸ್ಥಳಿಯರು ಅರ್ಜಿ ಹಾಕಿದ್ದರೂ ನೇಮಕಾತಿ ಮಾತ್ರ ಹೊರಗಿನ ಜನರಿಗೆ ಆಗುತ್ತಿದ್ದು ಇಲ್ಲಿಯವರಿಗೆ ತೊಂದರೆಯಾಗುತ್ತಿದೆ. ಸರ್ಪ ಸಂಸ್ಕಾರಕ್ಕೆ 100 ಮಂದಿ ಬ್ರಾಹ್ಮಣರು ಹಾಗೂ 150 ಮಂದಿ ಸಹಾಯಕರಾಗಿ ಹೊರಗಿನ ಬ್ರಾಹ್ಮಣರ ಬದಲಾಗಿ ಸುಬ್ರಹ್ಮಣ್ಯದ ಆಸುಪಾಸಿನ ಅಂದರೆ ಸುಳ್ಯ, ಪುತ್ತೂರು ವಲಯದ ಬ್ರಾಹ್ಮಣರನ್ನು ಬಳಸಿಕೊಳ್ಳಬೇಕು. ಇತ್ತೀಚೆಗೆ ಬಂದಿರುವ ಸಿಬ್ಬಂದಿಗಳು ಪರ್ಮನೆಂಟಾಗುತ್ತಿದ್ದಾರೆ. ಆದರೆ ಇಲ್ಲಿಯೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹೆಚ್ಚಿನ ಸಿಬ್ಬಂದಿಗಳಿಗೆ ಪರ್ಮನೆಂಟ್ ಆಗಿಲ್ಲ. ಇತ್ತೀಚೆಗೆ ಹೊರಗಿನ ಕಾರ್ಮಿಕರನ್ನು ಸುಬ್ರಹ್ಮಣ್ಯದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು ಇದರಿಂದ ಸ್ಥಳೀಯ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಹಾಗಾಗಿ ಸುಳ್ಯ, ಗುತ್ತಿಗಾರು, ಕಡಬ ಹಾಗೂ ಹರಿಹರ ಪಲ್ಲತಡ್ಕ ಆಸುಪಾಸಿನ ವಿದ್ಯಾವಂತರನ್ನು ಸಿಬ್ಬಂದಿಗಳಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ರವಿ ಗುಂಡಡ್ಕ ಉಪಸ್ಥಿತರಿದ್ದರು.
- Friday
- November 1st, 2024