ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಇಚ್ಛೆ ಇದ್ದೇ ಇರುತ್ತದೆ.
ನಮ್ಮೆಲ್ಲರನ್ನು ಮುಂದೆ ಕೊಂಡು ಹೋಗುವುದು ನಮ್ಮ ಸಾತ್ವಿಕ ಕನಸು ಮತ್ತು ಗುರಿ. ಆ ನಿಟ್ಟಿನಲ್ಲಿ ನಮ್ಮ ವಿಚಾರಗಳನ್ನು ನಾವೇ ಹತೋಟಿಯಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗುವುದೇ ಸ್ಥಿತಪ್ರಜ್ಞೆ ಎಂದು ಅಮೇರಿಕಾದ ಡೇಟನ್ ವಿಶ್ವ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ. ಗುಡ್ಡೆ ರಾಘವ ಗೌಡರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದೊಂದಿಗೆ ಹಮ್ಮಿಕೊಂಡ ನೀನಾಗು ಸ್ಥಿತಪ್ರಜ್ಞ ಎನ್ನುವ ವಿಷಯದ ಕುರಿತ ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ
ಪ್ರೊ. ಎಂ ಬಾಲಚಂದ್ರ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನದ ಸಮತೋಲನಕ್ಕೆ ಸ್ಥಿತಪ್ರಜ್ಞೆ ಬಹಳ ಮುಖ್ಯ. ಯುವಜನತೆ ಗೊಂದಲಗಳಿಂದ ಹೊರಬಂದು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಶ್ರೀಮತಿ ರತ್ನಾವತಿ ಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪವಿತ್ರಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ ಸ್ವಾಗತಿಸಿ, ಕನ್ನಡ ಸಂಘದ ಸಂಚಾಲಕಿ, ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಉಪನ್ಯಾಸಕರು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕನ್ನಡ ಅಭಿಮಾನಿಗಳು
ಈ ವಿಚಾರ ಸಂಕಿರಣದ ಸದುಪಯೋಗ ಪಡೆದುಕೊಂಡರು.
- Sunday
- November 24th, 2024