ನ.ಪಂ.ಸದಸ್ಯ ಉಮ್ಮರ್ ಅವರು ನಗರದಲ್ಲಿನ ಫುಟ್ಪಾತ್ ನ ತಡೆಬೇಲಿಯನ್ನು ತಮ್ಮ ಪ್ರಭಾವ ಬಳಸಿ ತೆಗೆದಿದ್ದಾರೆ ಹಾಗೂ ಹಲವು ಅನಧಿಕೃತ – ಅಕ್ರಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ನಗರ ಮಹಾಶಕ್ತಿಕೇಂದ್ರ ಗಂಭೀರ ಆರೋಪ ಹೊರಿಸಿದೆ. ಅಕ್ರಮವನ್ನು ಸಕ್ರಮ ಮಾಡುವ ಉದ್ಯೋಗವನ್ನೇ ಮಾಡುತ್ತಿರುವ ಉಮ್ಮರ್ ಅವರ ಮೇಲೆ ನ.ಪಂ. ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರ ಶಕ್ತಿಕೇಂದ್ರ ಆಗ್ರಹಿಸಿದೆ.
ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಗೂಡ್ಸ್ ವಾಹನಗಳಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದು ಅದು ಹಲವಾರು ಅಪಘಾತಗಳಿಗೆ ಕಾರಣವಾಗುತ್ತದೆ. ಇದರ ಕುರಿತು ನ.ಪಂ. ಕ್ರಮಕೈಗೊಳ್ಳಬೇಕು ಎಂದು ವರ್ತಕರ ಸಂಘದ ವತಿಯಿಂದ ದೂರು ನೀಡಲಾಗಿತ್ತು. ಆದರೆ ಕೆ.ಎಸ್.ಉಮ್ಮರ್ ತಮ್ಮ ಪ್ರಭಾವ ಬಳಸಿ ನ.ಪಂ. ಕ್ರಮ ಕೈಗೊಳ್ಳದಂತೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಗರ ಮಹಾಶಕ್ತಿಕೇಂದ್ರ ಆರೋಪಿಸಿದೆ. ಗಾಂಧಿನಗರದ ಮಸೀದಿ ಎದುರುಗಡೆಯ ಹಾಗೂ ಶಾಸ್ತ್ರಿ ವೃತ್ತದ ಬಳಿ ಇದ್ದ ಕಬ್ಬಿಣದ ಬೇಲಿಯನ್ನು ಸ್ವತಃ ಕೆ ಎಸ್ ಉಮ್ಮರ್ ಅವರೇ ತೆಗೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೇ ಅವರು ಇನ್ನಷ್ಟು ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಾಥ್ ನೀಡಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಿ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಆರೋಪದ ಕುರಿತು ಉಮ್ಮರ್ ಅವರು ಪ್ರತಿಕ್ರಿಯಿಸಿದ್ದು ಬಿಜೆಪಿ ಮಹಾಶಕ್ತಿಕೇಂದ್ರದ ನಾಯಕರು ಸುಳ್ಯ ನಗರದಲ್ಲಿ ಉಮ್ಮರ್ ಅವರೇ ಪ್ರಭಾವಶಾಲಿ ಎಂದು ಬಿಂಬಿಸಿದ್ದಾರೆ. ಹಾಗಾಗಿ ಸುಳ್ಯದ ನ.ಪಂ. ಅಧ್ಯಕ್ಷರು ಮತ್ತು ಬಿಜೆಪಿಯ 14 ಮಂದಿ ಸದಸ್ಯರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು. ಐ ಬಿ ಚಂದ್ರಶೇಖರ್ ಅವರು ನಾನು ಅಕ್ರಮ ಕೆಲಸಗಳಲ್ಲಿ ತೊಡಗಿದ್ದೇನೆ ಎಂಬ ಆರೋಪವನ್ನು ಕಲ್ಕುಡ ದೇವಸ್ಥಾನದಲ್ಲಿ ಬಂದು ಮಾಡಲಿ ಎಂದು ಹೇಳಿದರು. ನಾನು ಯಾವುದೇ ಅಕ್ರಮದಲ್ಲಿ ತೊಡಗಿಲ್ಲ. ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಕಣ್ಣು ಕಾಣದ ವಿಕಲಾಂಗನ ಪರವಾಗಿ ನಾನು ಹೋರಾಟ ಮಾಡಿದ್ದಕ್ಕೆ ಬಿಜೆಪಿ ನನ್ನನ್ನು ಈ ರೀತಿ ಬಿಂಬಿಸುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಯ ಸುಳ್ಯದ ನ.ಪಂ.ಅಧ್ಯಕ್ಷರು ಹಾಗೂ ಉಳಿದವರು ಏನೆಲ್ಲಾ ಮಾಡಿದ್ದಾರೆ , ಎಷ್ಟು ಕಮಿಷನ್ ಹೋಗಿದೆ ಎಂದು ಬಯಲಿಗೆಳೆಯುತ್ತೇನೆ ಎಂದಿದ್ದಾರೆ.