ಅಫ್ಘಾನಿಸ್ತಾನದ ತಾಲಿಬಾನಿಗಳ ಮಾನಸಿಕತೆಯ ವ್ಯಕ್ತಿಗಳು ಭಾರತದಲ್ಲೂ ಇದ್ದು ಹಿಂದೂ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅದೇ ಮಾನಸಿಕತೆಯ ವ್ಯಕ್ತಿಗಳು ಹಿಂದೂಗಳನ್ನು ಶೋಷಣೆ ಮಾಡುವ ಸನ್ನಿವೇಶಗಳೂ ಎದುರಾಗಬಹುದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ.
ತಾಲೂಕಿನ ಮಂಡೆಕೋಲು ಗ್ರಾಮದ ಮೈಲೆಟ್ಟಿಪಾರೆ ಎಂಬಲ್ಲಿ ಗೌರಿ ಎಂಬ ಬಡ ದಲಿತ ಮಹಿಳೆಗೆ ವೇದಿಕೆಯ ನೇತೃತ್ವದಲ್ಲಿ ಕಟ್ಟಿಸಿಕೊಟ್ಟ ಮನೆಯ ಕೀಯನ್ನು ಹಸ್ತಾಂತರಿಸಿ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅಫ್ಘಾನಿಸ್ತಾನದಲ್ಲಿ
ವಿಕೃತಿ ಮೆರೆಯುತ್ತಿರುವ ತಾಲಿಬಾನಿಗಳು ಅವರದೇ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ತಾಲಿಬಾನಿಗಳ ಅಟ್ಟಹಾಸಕ್ಕೆ ಭಾರತದಲ್ಲೂ ಬೆಂಬಲ ಘೋಷಿಸುವ
ಜನರಿದ್ದಾರೆ ಎಂಬುದೇ ಆತಂಕದ ವಿಷಯ. ಸಿಎಎ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಮುಂದಾಳತ್ವ ವಹಿಸಿದವರು, ಇತ್ತೀಚೆಗೆ ಕಬಕದಲ್ಲಿ ಮೆರವಣಿಗೆಯೊಂದರಲ್ಲಿ
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ರ ಫೊಟೋ ತೆಗೆಯುವಂತೆ ಆಗ್ರಹಿಸಿದ ಬಂಡುಕೋರರು, ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕಾಣಿಸಿಕೊಂಡವರು ಇದೇ ತಾಲಿಬಾನಿಗಳ ಮಾನಸಿಕತೆಯನ್ನು ಹೊಂದಿದವರಾಗಿದ್ದಾರೆ. ಹಾಗಾಗಿ
ತಾಲಿಬಾನಿಗಳ ಮಾನಸಿಕತೆಯನ್ನು ಹೊಂದಿದ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಹಾಗಿದ್ದರೂ ದೇಶವನ್ನು ಸುರಕ್ಷಿತವಾಗಿ ಕಾಪಾಡುವವರ ಕೈಯಲ್ಲೇ ಇದೀಗ ಆಡಳಿತ ಇರುವುದು ಸಂತಸದ ವಿಷಯವಾಗಿದೆ ಎಂದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಅದೆಷ್ಟೋ ವಿನಾಶಕಾರಿ ಶಕ್ತಿಗಳ ಕೈಯಲ್ಲಿ ನಲುಗಿದ್ದರೂ ದೇಶ ಕಾಪಾಡುವಲ್ಲಿ ಹಿಂದೂ ವೀರರು ಸಮರ್ಥರಾಗಿದ್ದಾರೆ. ಒಂದೊಮ್ಮೆ ತಾಲಿಬಾನಿ ಮಾನಸಿಕತೆಯ ವ್ಯಕ್ತಿಗಳು ದೇಶದ ಅಖಂಡತೆಯನ್ನು ಒಡೆಯಲೆತ್ನಿಸಿದರೂ ಅವರನ್ನು ಹಿಮ್ಮೆಟ್ಟಿಸುವಲ್ಲಿ ನಾವು
ಸಮರ್ಥರಿದ್ದೇವೆ. ಆದರೆ, ಹಿಂದೂ ಸಮುದಾಯ ಧರ್ಮ ರಕ್ಷಣೆಗಾಗಿ ಸಾಯುತ್ತೇನೆ ಎಂಬ ಘೋಷ ವಾಕ್ಯದ ಬದಲಾಗಿ ಆ ಘೋಷಣೆಯನ್ನು ಆಚರಣೆಗೆ ತರುವಂತಾಗಬೇಕು ಎಂದರು.
ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ ನ.ಸೀತಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ನಾವೆಲ್ಲರೂ ಹಿಂದೂ ಸಂರಕ್ಷಣೆಯ ಹೊಣೆಯನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳೋಣ ಎಂದರು.
ಇದಕ್ಕೂ ಮೊದಲು ಜಗದೀಶ್ ಕಾರಂತರು ಗ್ರಾಮದ ಮೈಲೆಟ್ಟಿಪ್ಪಾರೆಯ ದಲಿತ ಮಹಿಳೆ ಗೌರಿ ಅವರ ಮನೆಗೆ ತೆರಳಿ ದೀಪ ಬೆಳಗಿಸಿ, ಹೊಸ ಮನೆಯ ಕೀ ಹಸ್ತಾಂತರಿಸಿ ಕುಟುಂಬಿಕರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕ ಜಯರಾಮ್ ಚಾಕೋಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನವೀನ್ ಅತಿಥಿಗಳನ್ನು ಸ್ವಾಗತಿಸಿದರು.