ಜಾಲ್ಸೂರು ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ಆಗಬೇಕಾಗಿದ್ದು ಈ ಹಿಂದೆ ಅಧಿಕಾರಿಗಳು ಆಶ್ವಾಸನೆ ನೀಡಿದ್ದರೆ ಹೊರತು ಯಾವುದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿ ಈ ಕೆಲಸಗಳನ್ನು ಶೀಘ್ರದಲ್ಲೇ ಮಾಡಬೇಕೆಂಬ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನೀಡಿ ಮನವಿ ಮಾಡಲಾಯಿತು. ಮನವಿಯಲ್ಲಿ ಈ ಕೆಳಗೆ ಕಾಣಿಸಿರುವ ತುರ್ತು ಸಮಸ್ಯೆ ಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ. ಮರಸಂಕ ಎಂಬಲ್ಲಿ 8 ಮನೆಗಳಿಗೆ ರಸ್ತೆ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಶೀಘ್ರದಲ್ಲೇ ರಸ್ತೆಯ ವ್ಯವಸ್ಧೆ ಮಾಡಬೇಕು. ಅಡ್ಕಾರ್ 3 ನೇ ವಾರ್ಡಿನಲ್ಲಿ ತಡೆ ಗೋಡೆ ನಿರ್ಮಿಸಲು ಗುಂಡಿ ಅಗೆದು 5 ತಿಂಗಳಾದರೂ ಯಾವುದೇ ತಡೆ ಗೋಡೆ ಕೆಲಸ ಶುರುವಾಗಿಲ್ಲ. ಅಪಾಯದ ಮುನ್ಸೂಚನೆ ಕಾಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಡೆಗೊಡೆ ನಿರ್ಮಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಾಲ್ಸೂರು ಕಾಸರಗೋಡು ರಸ್ತೆ ಮರಸಂಕ ಎಂಬ ಪ್ರದೇಶದಲ್ಲಿ ತಡೆ ಗೋಡೆ ಇಲ್ಲದೆ ತೋಟಕ್ಕೆ ವಾಹನಗಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕದಿಕಡ್ಕದ ಚರಂಡಿಯಲ್ಲಿ ಮಣ್ಣು ನಿಂತು ನೀರು ಹೋಗದೆ ರಸ್ತೆಯಲ್ಲೇ ನೀರು ಹರಿದು ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಗಳಲ್ಲಿ ಬೀದಿ ದೀಪ ಇಲ್ಲದ ಸಮಸ್ಯೆಯಾಗುತ್ತಿದೆ. ಹಾಗಾಗಿ ಶೀಘ್ರದಲ್ಲೇ ಇದಕ್ಕೆ ಬೀದಿ ದೀಪ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಡ್ಕಾರ್ ಕೋಲೋನಿಯಿಂದ ಹರಿದು ಬರುವ ಕೊಳಚೆ ನೀರು ಚರಂಡಿಯಲ್ಲಿ ಹಾದುಹೊಗದೇ ನೇರವಾಗಿ ರಸ್ತೆಗೆ ಹರಿಯುವುದರಿಂದ ದುರ್ವಾಸನೆ ಬರುವ ಕಾರಣ ಆ ಭಾಗದ ಜನರಿಗೆ ನಡೆದಾಡಲು ಕಷ್ಟವಾಗುತ್ತಿದೆ.
ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಪರಿಹರಿಸಿ ಕೊಡಬೇಕು ಹಲವಾರು ಬಾರಿ ಸಾರ್ವಜನಿಕರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದು ಇನ್ನೂ ಹೀಗೆ ಮುಂದುವರಿದಲ್ಲಿ ಸಾರ್ವಜನಿಕರನ್ನು ಸೇರಿಸಿ ಪಂಚಾಯತ್ ಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಸ್ ಡಿಪಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಅಡ್ಕಾರ್ ಬೂತ್ ಅಧ್ಯಕ್ಷ ಮಿಸ್ಬಾಹ್ ಅಡ್ಕಾರ್, ಕಾರ್ಯದರ್ಶಿ ಹಾರಿಸ್ ಕದಿಕಡ್ಕ,ಎಸ್.ಡಿ.ಟಿ.ಯು ಸುಳ್ಯ ಕಾರ್ಯದರ್ಶಿ ಅಬ್ದುರಹ್ಮಾನ್ ಅಡ್ಕಾರ್ ಉಪಸ್ಥಿತರಿದ್ದರು.