ಸುಮಾರು 26 ವರುಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿಸಿ ಪದೋನ್ನತಿಗೊಂಡು ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಗೆ ಮುಖ್ಯ ಶಿಕ್ಷಕರಾಗಿ ತೆರಳಿರುವ ಗೋಪಿನಾಥ್.ಎಂ ಇವರಿಗೆ ಸರಕಾರಿ ಪ್ರೌಢಶಾಲೆ ಎಲಿಮಲೆ, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ವತಿಯಿಂದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯಿತು. ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಸಂಚಾಲಕ ಎ.ವಿ.ತೀರ್ಥರಾಮ ರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಉಂಗುರ ತೊಡಿಸಿ ಸನ್ಮಾನಿಸಿದರು.
ನಂತರ ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸನ್ಮಾನ ನೇರವೇರಿತು. ಸರಕಾರಿ ಪ್ರೌಢಶಾಲೆ ಎಲಿಮಲೆ ಇದರ ಸಹಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿರುವ ದಯಾನಂದ ಎನ್.ಕೆ ಇವರು 24 ವರುಷಗಳ ಅನುಭವ ಸುಂದರ ಕ್ಷಣಗಳ ಸುದೀರ್ಘವಾಗಿ ಅಭಿನಂದನಾ ಭಾಷಣ ಮಾಡಿದರು. ನಂತರ ಮುಖ್ಯ ಅತಿಥಿಗಳು ಗೋಪಿನಾಥ್ ಎಂ. ರವರ ಜೊತೆಗಿನ ಅನುಭವ ಮತ್ತು ಅಭಿನಂದನಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗೋಪಿನಾಥ್ ಎಂ. ರವರು ತನ್ನ ತಂದೆ ತಾಯಿ, ಹಿರಿಯರನ್ನು ಸ್ಮರಿಸಿ, ತಾನು ವಿದ್ಯಾರ್ಥಿಯಾಗಿ ಹಾಗೂ ಸಹಶಿಕ್ಷಕರಾಗಿ ಕಳೆದ ಅನುಭವಗಳನ್ನು ಹಂಚಿಕೊಂಡರು. ತಂದೆ ಗಣಪಯ್ಯ ಗೌಡ ಮೆತ್ತಡ್ಕ ಹಾಗೂ ತಾಯಿ ಪಾರ್ವತಿ ಇವರ ನೆನಪಿಗಾಗಿ ರೂ 10,000 ರೂಪಾಯಿ ಶಾಶ್ವತ ದತ್ತಿನಿಧಿ ಸ್ಥಾಪಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ನಂದಗೋಕುಲ ವಹಿಸಿದ್ದರು. ಸರಕಾರಿ ಪ್ರೌಢಶಾಲೆ ಎಲಿಮಲೆ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶೈಲೇಶ್ ಅಂಬೆಕಲ್ಲು, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ದುರ್ಗಾದಾಸ್ ಮೆತ್ತಡ್ಕ, ಪ್ರಶಾಂತ್ ಮೆದು, ಪ್ರೇಮಲತಾ ಕೇರ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸಹಕಾರ ಸಂಘ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಧರ್ ಕೆರೆಮೂಲೆ, ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ್ದ ಗೋಪಿನಾಥ್ ಎಂ. ಇವರ ಪತ್ನಿ ವಳಲಂಬೆ ಶಾಲಾ ಶಿಕ್ಷಕಿ ಪ್ರಮೀಳಾ ಗೋಪಿನಾಥ್ ಹಾಗೂ ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು, ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಹಶಿಕ್ಷಕ ಸುಂದರ ಕೆ. ವಂದಿಸಿ, ಸಹಶಿಕ್ಷಕ ಮುರಳೀಧರ ಪಿ.ಜೆ. ಕಾರ್ಯಕ್ರಮ ನಿರೂಪಿಸಿದರು.