ಬೆಳ್ಳಾರೆ ಪೋಲೀಸ್ ಠಾಣೆ ಮತ್ತು ಶ್ರೀ ಸೀತಾರಾಮಾಂಜನೇಯ ಭಾರತಿ ಕುಣಿತ ಭಜನಾ ತಂಡ ಏಣ್ಮೂರು ಇದರ ಸಂಯುಕ್ತ ಆಶ್ರಯದಲ್ಲಿ ಏಣ್ಮೂರು ಮತ್ತು ಕಲ್ಮಡ್ಕ ಗ್ರಾಮಗಳ ಬೀಟ್ ಸಭೆ ಮತ್ತು ಮಾಹಿತಿ ಕಾರ್ಯಾಗಾರ ಜ. 1 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಳ್ಳಾರೆ ಠಾಣೆ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಮಾತನಾಡಿ ವಾಹನ ಚಾಲಕರಿಗೆ ಮತ್ತು ಮಾಲೀಕರಿಗೆ ವಾಹನಗಳ ಇನ್ಸೂರೆನ್ಸ್ ಬಗ್ಗೆ ಮತ್ತು ಹೆಲ್ಮೆಟ್ ಧರಿಸುವ ಬಗ್ಗೆ ಮತ್ತು ಎಲ್ಲಾ ದಾಖಲೆಯನ್ನು ಕಡ್ಡಾಯವಾಗಿ ತಮ್ಮ ಜೊತೆಯಲ್ಲಿಯೇ ಇಟ್ಟು ಕೊಂಡಿರಬೇಕು. ಕಾನೂನನ್ನು ಪ್ರತಿಯೊಬ್ಬ ಪ್ರಜೆಯು ಗೌರವಿಸಬೇಕು. ಮತ್ತು ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ಮುಕ್ತ ಗೊಳಿಸಿ , ಪೋಷಕರು ಅವರೊಂದಿಗೆ ತಮ್ಮ ಸಮಯವನ್ನು ಕಳೆಯಬೇಕು, ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಜಾಗೃತರಾಗಬೇಕು ಎಂದು ತಿಳಿಸಿದರು.
ಪುತ್ತೂರು ತಾಲೂಕಿನ ಉಪತಹಶೀಲ್ದಾರ್ ಸುಲೋಚನರವರು ಹೆಣ್ಣು ಮಕ್ಕಳ ದೌರ್ಜನ್ಯ ಮತ್ತು ಪೊಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಹೆಣ್ಣು ಮಕ್ಕಳನ್ನು ಆತ್ಮೀಯವಾಗಿ ನೋಡಿಕೊಳ್ಳುವುದು, ಅವರೊಂದಿಗೆ ಮುಕ್ತವಾಗಿ ಮಾತನಾಡುವುದು ತನ್ನ ಸುತ್ತ ಮುತ್ತಲು ಆಗುವ ಪ್ರತಿಯೊಂದು ವಿಷಯದ ಬಗ್ಗೆ ಮನೆಯಲ್ಲಿ ಪೋಷಕರು ಚರ್ಚಿಸಬೇಕು. ಮಕ್ಕಳಿಗೆ ಬೇರೆ ಯಾರಿಂದಲಾದರೂ ತೊಂದರೆ ಆಗುತ್ತಿದ್ದರೆ ಅದನ್ನು ಮನೆಯಲ್ಲಿ ಅಥವಾ ಶಿಕ್ಷಕರ ಜೊತೆಯಲ್ಲಿ ಹೇಳಿಕೊಳ್ಳುವುದರಿಂದ ಮುಂದೆ ಸಂಭವಿಸಬಹುದಾದ ಘಟನೆಗಳ ಬಗ್ಗೆ ಜಾಗೃತರಾಗಲು ಸಾಧ್ಯ ಎಂದು ನುಡಿದರು.
ವೇದಿಕೆಯಲ್ಲಿ ಏಣ್ಮೂರು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಗೌಡ ಇವರು ಭಜನಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸ. ಪ್ರೌಢಶಾಲಾ ಎಣ್ಮೂರು ಇಲ್ಲಿನ ಶಿಕ್ಷಕಿ ದಿವ್ಯ ಎಂ. ಮಾತನಾಡಿ ಹೆಣ್ಣು ಮಕ್ಕಳು ರಕ್ಷಣೆ ನಮ್ಮೆಲ್ಲರ ಹೊಣೆ ಮಕ್ಕಳ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಹೇಳಿದರು. ಶ್ರೀ ರಾಮ ಭಜನಾ ಮಂದಿರದ ಸ್ಥಾಪಕರಾದ ಕೆ.ಎನ್ ರಘುನಾಥ ರೈ ಇವರು ಅಧ್ಯಕ್ಷರ ನೆಲೆಯಲ್ಲಿ ಮಾತನಾಡಿ ಶುಭಹಾರೈಸಿದರು. ಶ್ರೀ ರಾಮ ಕುಣಿತ ಭಜನಾ ತಂಡದ ಅಧ್ಯಕ್ಷೆ ಶ್ರೀಮತಿ ಶೈಲಜಾ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಎಣ್ಮೂರು ಮತ್ತು ಕಲ್ಮಡ್ಕ ಗ್ರಾಮದ ಬೀಟ್ ಪೊಲೀಸ್ ಮಹದೇವ್ ಪ್ರಸಾದ್, ಶ್ರೀ ರಾಮ ಕುಣಿತ ಭಜನಾ ತಂಡದ ಗೌರವ ಸಲಹೆಗಾರ ಸುಧೀನ್ ರೈ ಉಪಸ್ಥಿತರಿದ್ದು ಶುಭ ಹಾರೈಸಿದರು. ಕುಣಿತ ಭಜನಾ ತರಬೇತುದಾರ ಸದಾನಂದ ಆಚಾರ್ಯ ಕಾಣಿಯೂರು ಕಾರ್ಯಕ್ರಮ ಆಯೋಜಿಸಿದರು. ವಿದ್ಯಾರ್ಥಿಗಳಾದ ಕು.ದೇವಿಕಾ ಕು.ಅಸ್ಮಿ, ಕು. ರಕ್ಷ ಪ್ರಾರ್ಥಿಸಿದರು.ಶಿಕ್ಷಕಿ ಜ್ಯೋತಿ ಲಕ್ಷ್ಮೀ ಇವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಕು. ಸ್ವಾತಿ ಕೆ.ಪಿ ವಂದಿಸಿದರು. ವಿದ್ಯಾರ್ಥಿನಿ ಕು. ಆತ್ಮಿ ಕಾರ್ಯಕ್ರಮ ನಿರೂಪಿಸಿದರು .