“ಕುಕ್ಕೆ ಸುಬ್ರಹ್ಮಣ್ಯದಲ್ಲಿ 24 ಗಂಟೆ ವೈದ್ಯಕೀಯ ಸೇವೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿ” : ಎಚ್.ಡಿ. ಕುಮಾರಸ್ವಾಮಿ ; ಭಕ್ತರ ಕಾಣಿಕೆ ಹಣದಿಂದಲೇ ಆರೋಗ್ಯ ಸೌಲಭ್ಯ ಒದಗಿಸಲು ಅವಕಾಶ ; ಚಿನ್ನದ ರಥ ನಿರ್ಮಾಣದ ಬೇಡಿಕೆ ಈಡೇರಿಸುವ ಭರವಸೆ

ಸುಬ್ರಹ್ಮಣ್ಯ : “ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು 24 ಗಂಟೆಗಳ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ದೇವಸ್ಥಾನಕ್ಕೆ ಭಕ್ತರು ನೀಡುವ ಕಾಣಿಕೆ ಹಣವನ್ನು ಬಳಸಿಕೊಂಡು ಈ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

. . . . . . . . .

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕ್ಷೇತ್ರದಲ್ಲಿ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದರೂ ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮುಂದಿಟ್ಟಿರುವ 24 ಗಂಟೆಗಳ ವೈದ್ಯಕೀಯ ಸೇವೆಯ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದರು.

. . . . . . .

“ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಏನೇ ಇರಲಿ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ದೇವರಿಗೆ ನೀಡುವ ಕಾಣಿಕೆಯಿಂದ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಸಂಗ್ರಹವಾಗುತ್ತಿದೆ. ಭಕ್ತರು ನೀಡುವ ಹಣವನ್ನು ಅವರ ಅನುಕೂಲಕ್ಕಾಗಿಯೇ ಬಳಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಪ್ರತ್ಯೇಕವಾಗಿ ಹಣ ಹಂಚಿಕೆ ಮಾಡುವ ಅಗತ್ಯವಿಲ್ಲ. ಭಕ್ತರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸಲಹೆ ನೀಡಿದರು.

ಚಿನ್ನದ ರಥ ನಿರ್ಮಾಣದ ಬೇಡಿಕೆ ಈಡೇರಿಸುತ್ತೇನೆ : “ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥ ನಿರ್ಮಾಣವಾಗಬೇಕೆಂಬುದು ಹಲವಾರು ವರ್ಷಗಳಿಂದ ಭಕ್ತರ ಆಸೆ ಹಾಗೂ ನಿರೀಕ್ಷೆಯಾಗಿದೆ. ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಿನ್ನದ ರಥ ನಿರ್ಮಿಸಲು ನಿರ್ಧರಿಸಿದ್ದೆ. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಈ ವಿಚಾರದಲ್ಲಿ ಗಮನ ಹರಿಸಿಲ್ಲ” ಎಂದು ಹೇಳಿದರು. “ನಾಡಿನ ಜನತೆಯ ಮೇಲೆ ದೇವರ ಸಂಪೂರ್ಣ ಅನುಗ್ರಹವಿದ್ದು, ಭಕ್ತರ ಬಹುದಿನಗಳ ಬೇಡಿಕೆಯಾಗಿರುವ ಚಿನ್ನದ ರಥ ನಿರ್ಮಾಣದ ಆಶಯವನ್ನು ಈಡೇರಿಸುವುದಾಗಿ” ಭರವಸೆ ನೀಡಿದರು.

ಯುವಕರ ರಾಜಕೀಯ ದುರ್ಬಳಕೆ ನಿಲ್ಲಲಿ : ಕರಾವಳಿ ಭಾಗದ ಯುವಕರು ಉದ್ಯೋಗ ಅರಸಿ ಬೇರೆಡೆ ತೆರಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಇಲ್ಲಿಯೇ ಉದ್ಯೋಗ ಸೃಷ್ಟಿಸಲು ಸಾಕಷ್ಟು ಅವಕಾಶಗಳಿವೆ. ಆದರೆ ಸರ್ಕಾರಗಳು ಈ ಅವಕಾಶಗಳನ್ನು ಬಳಸಿಕೊಳ್ಳುವ ಬದಲು ಅನಗತ್ಯ ಸಂಘರ್ಷಗಳಿಗೆ ಅವಕಾಶ ಮಾಡಿಕೊಟ್ಟು ಯುವಕರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ” ಎಂದು ಆರೋಪಿಸಿದರು. “ಕರಾವಳಿ ಭಾಗದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಲು ಹಲವು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದರು.

ಜಿಪಂ, ತಾಪಂ ಚುನಾವಣೆ ಮೈತ್ರಿ ಕುರಿತು ಶೀಘ್ರ ನಿರ್ಧಾರ : ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ಜೆಡಿಎಸ್ ಸಿದ್ಧತೆ ಮತ್ತು ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಈಗಾಗಲೇ ಪಕ್ಷದ ಪ್ರಮುಖರೊಂದಿಗೆ ಮೂರ್ನಾಲ್ಕು ಸಭೆಗಳನ್ನು ನಡೆಸಲಾಗಿದೆ. ಸಭೆಗಳಲ್ಲಿ ಪಕ್ಷದ ಮುಖಂಡರು ಹಲವು ಸಲಹೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದರು. “ಮೈತ್ರಿ ಪಕ್ಷವಾದ ಬಿಜೆಪಿಯ ನಾಯಕರು ತಮ್ಮ ಕೋರ್ ಕಮಿಟಿಯಲ್ಲಿ ಕೈಗೊಳ್ಳುವ ತೀರ್ಮಾನ ಹಾಗೂ ಮುಂದಿನ ಚರ್ಚೆಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯ ರಾಜಕೀಯ ಪರಿಸ್ಥಿತಿ ಮತ್ತು ಕಾಂಗ್ರೆಸ್ ಪಕ್ಷದ ಆಡಳಿತವನ್ನು ಎದುರಿಸುವ ನಿಟ್ಟಿನಲ್ಲಿ ಉಭಯ ಪಕ್ಷಗಳ ಮುಂದಿನ ತೀರ್ಮಾನವನ್ನು ಪ್ರಕಟಿಸಲಾಗುವುದು” ಎಂದರು.

ರಾಜ್ಯದಲ್ಲಿ ಆಡಳಿತ ವೈಫಲ್ಯ, ಭ್ರಷ್ಟಾಚಾರ ಆರೋಪ : ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಕುಮಾರಸ್ವಾಮಿ, “ರೈತರ ಪರಿಸ್ಥಿತಿ ಉತ್ತಮವಾಗಿಲ್ಲ. ಯುವಕರು ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಆಡಳಿತದಲ್ಲಿ ಹಲವು ರೀತಿಯ ವೈಫಲ್ಯಗಳು ಕಂಡುಬರುತ್ತಿವೆ” ಎಂದು ಆರೋಪಿಸಿದರು. “ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಕಂದಕ ಸೃಷ್ಟಿಯಾಗಿದ್ದು, ಪರಸ್ಪರ ವಿಶ್ವಾಸದ ಕೊರತೆ ಕಂಡುಬರುತ್ತಿದೆ. ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಇಂತಹ ಆಡಳಿತ ವೈಖರಿಯೇ ರಾಜ್ಯದ ಅಭಿವೃದ್ಧಿ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ” ಎಂದು ದೂರಿದರು. “ಸರ್ಕಾರ ಕೆಲವು ತೀರ್ಮಾನಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಜನಸಾಮಾನ್ಯರ ನಿರೀಕ್ಷೆಗಳನ್ನು ಕಡೆಗಣಿಸಿ ಸ್ವೇಚ್ಛಾಚಾರದಿಂದ ವರ್ತಿಸುತ್ತಿದೆ. ಇದು ರಾಜ್ಯದ ಜನರ ಹಿತಾಸಕ್ತಿ ಹಾಗೂ ಅಭಿವೃದ್ಧಿಗೆ ವಿರುದ್ಧವಾಗಿದೆ” ಎಂದರು.

ಸುಬ್ರಹ್ಮಣ್ಯ ಪತ್ರಕರ್ತರಿಗೆ ಮೂಲಸೌಕರ್ಯ : “ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಹಾಗೂ ಪ್ರಮುಖ ವ್ಯಕ್ತಿಗಳು ಆಗಮಿಸುತ್ತಿದ್ದು, ಇಲ್ಲಿನ ಮಾಧ್ಯಮ ಪ್ರತಿನಿಧಿಗಳು ಪ್ರಮುಖರ ಅಭಿಪ್ರಾಯ ಮತ್ತು ವಿಚಾರಗಳನ್ನು ಪ್ರಾಮಾಣಿಕವಾಗಿ ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. “ಸುಬ್ರಹ್ಮಣ್ಯ ಪ್ರೆಸ್ ಕ್ಲಬ್‌ನ ಪತ್ರಕರ್ತರ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರ ಅನುದಾನದ ಮೂಲಕ ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು. “ಸುಬ್ರಹ್ಮಣ್ಯದ ಪತ್ರಕರ್ತರು ಪ್ರೀತಿ, ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಜೆಡಿಎಸ್ ಮುಖಂಡರಾದ ಎಂ.ಬಿ ಸದಾಶಿವ, ಜಾಕೆ ಮಾದವ ಗೌಡ, ದಯಾಕರ ಆಳ್ವ, ಮೀರಾ ಸಾಹೇಬ್, ಸೋಮಸುಂದರ ಕೂಜುಗೋಡು, ಸುಕುಮಾರ್ ಕೋಡ್ತಗುಳಿ, ರಾಕೇಶ್ ಕುಂಟಿಕಾನ, ಡಾl ತಿಲಕ್ ಎ‌.ಎ, ಉದಯಕುಮಾರ್ ಡಿ.ಎಸ್, ಶಿವರಾಮ ಚಿಲ್ತಡ್ಕ, ಸತ್ಯನಾರಾಯಣ ಚಿಮ್ಟಿಕಲ್ಲು, ಜಯಂತ ಪಂಬೆತ್ತಾಡಿ, ನಿಹಾಲ್ ಕೋಡ್ತುಗಳಿ, ಬಿಜೆಪಿ ಮುಖಂಡರಾದ ವೆಂಕಟ್ ದಂಬೆಕೋಡಿ, ಸಂತೋಪ್ ಜಾಕೆ, ಗಿರಿಧರ ಸ್ಕಂದ, ದಿನೇಶ್ ಬಿ.ಎನ್, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಕಡಬ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading