ಮಕ್ಕಳ ದಿನಾಚರಣೆ ವಿಶೇಷ: ಅಂಜಲಿ ಮಾಂಟೆಸ್ಸರಿ ಪುಟಾಣಿಗಳಿಂದ ‘ಸುಳ್ಯ ದರ್ಶನ’


ಸುಳ್ಯ: ಮಕ್ಕಳ ದಿನಾಚರಣೆಯ ಪ್ರಯುಕ್ತ ನಗರದ ಅಂಜಲಿ ಮಾಂಟೆಸ್ಸರಿ ಶಾಲೆಯ (AMS) ವತಿಯಿಂದ ಪುಟಾಣಿ ಮಕ್ಕಳಿಗಾಗಿ ‘ಬೇಬೀಸ್ ಔಟ್ – ಚಿಲ್ಡ್ರನ್ಸ್ ಔಟ್’ ಶೀರ್ಷಿಕೆಯಡಿ ಒಂದು ದಿನದ ವಿಶೇಷ ‘ಸುಳ್ಯ ದರ್ಶನ’ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ತರಗತಿಯ ನಾಲ್ಕು ಗೋಡೆಗಳಾಚೆಗಿನ ಪ್ರಪಂಚವನ್ನು ಪರಿಚಯಿಸುವುದು ಹಾಗೂ ನೈಜ ಅನುಭವಗಳ ಮೂಲಕ ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ಈ ಪ್ರವಾಸದಲ್ಲಿ ಪುಟಾಣಿಗಳು ನಗರದ ಪ್ರಮುಖ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ವಿವಿಧ ಕೇಂದ್ರಗಳಿಗೆ ಭೇಟಿ:
ಮೊದಲಿಗೆ ನಗರದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಮಕ್ಕಳು ದೇವರ ದರ್ಶನ ಪಡೆದರು. ಬಳಿಕ ಸ್ನೇಹಾ ಶಾಲೆಗೆ ತೆರಳಿ ಅಲ್ಲಿನ ಮೃಗಾಲಯ ವೀಕ್ಷಿಸಿ, ಮರಳಿನ ಮನೆಯಲ್ಲಿ ಆಟವಾಡಿ ಸಂಭ್ರಮಿಸಿದರು. ನಂತರ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪುಟಾಣಿಗಳನ್ನು ಎಸ್.ಐ. ಉದಯ ರವಿ ಆತ್ಮೀಯವಾಗಿ ಬರಮಾಡಿಕೊಂಡು, ಠಾಣೆಯ ಕಾರ್ಯವೈಖರಿ ಹಾಗೂ ಪೊಲೀಸರ ಕರ್ತವ್ಯಗಳ ಕುರಿತು ಸರಳವಾಗಿ ವಿವರಿಸಿದರು.
ಬಳಿಕ ಅಂಚೆ ಕಚೇರಿಗೆ ಭೇಟಿ ನೀಡಿದ ಮಕ್ಕಳು ಪೋಸ್ಟ್ ಕಾರ್ಡ್, ಇನ್‌ಲ್ಯಾಂಡ್ ಲೆಟರ್ ಹಾಗೂ ಅಂಚೆ ಸೇವೆಗಳ ಬಗ್ಗೆ ಅರಿತುಕೊಂಡರು. ಮಸೀದಿಗೂ ಭೇಟಿ ನೀಡಿದ ಪುಟಾಣಿಗಳನ್ನು ಅಲ್ಲಿನ ಪ್ರಮುಖರು ಸಿಹಿತಿಂಡಿ ನೀಡಿ ಸ್ವಾಗತಿಸಿ, ಪ್ರಾರ್ಥನಾ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ಪ್ರವಾಸದ ಕೊನೆಯಲ್ಲಿ ಅಗ್ನಿಶಾಮಕ ದಳದ ಕೇಂದ್ರಕ್ಕೆ ಭೇಟಿ ನೀಡಿದಾಗ, ಸಿಬ್ಬಂದಿಯವರು ಬೆಂಕಿ ನಂದಿಸುವ ಉಪಕರಣಗಳು ಮತ್ತು ತುರ್ತು ರಕ್ಷಣಾ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಮಧ್ಯಾಹ್ನ ನಗರದ ರಸಪಾಕ ಹೋಟೆಲ್‌ನಲ್ಲಿ ಮಕ್ಕಳಿಗಾಗಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ.ಜಿ. ಮಾರ್ಗದರ್ಶನದಲ್ಲಿ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading