ಪುತ್ತೂರು : ಪ್ರಜಾ ಸೇವೆ ಆಂದೋಲನದಲ್ಲಿ “ಬಂದೂಕು ಪರವಾನಗಿ ನವೀಕರಣ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಕೆ” ; ಸಮಸ್ಯೆ ಪರಿಹರಿಸದಿದ್ದರೆ ರಸ್ತೆ ತಡೆಯ ಎಚ್ಚರಿಕೆ ನೀಡಿದ ರೈತರು

ಬಂದೂಕು ಪರವಾನಗಿ ನವೀಕರಣ ಸಮಸ್ಯೆಗಳ ಕುರಿತು ಸೆ.05ರಂದು ಪುತ್ತೂರಿನ ಪುರಭವನದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಕೆ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ರೈತರನ್ನು ಒಳಗೊಂಡ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಫರೀದ್ ರವರಿಗೆ ಅಹವಾಲು ಸಲ್ಲಿಕೆ ಮಾಡುತ್ತಾ “ದಕ್ಷಿಣ ಕನ್ನಡ ಜಿಲ್ಲೆಯ ರೈತರು ತಾವು ಬಂದೂಕು ಪರವಾನಗಿ ನವೀಕರಣದ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು” ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್.ಕೆ ರವರು “ಜಿಲ್ಲೆಯಲ್ಲಿ 8 ಸಾವಿರ ಕೋವಿ ಪರವಾನಗಿ ಇದ್ದು, ಈ ಪೈಕಿ ಸುಳ್ಯ, ಬೆಳ್ಳಾರೆ ಹಾಗೂ ಪುತ್ತೂರು ಭಾಗದ 2 ಸಾವಿರ ಕೋವಿಗಳನ್ನು ಠೇವಣಿ ಕೇಂದ್ರಗಳಲ್ಲಿ ಇಡಲಾಗಿದೆ. ಇವುಗಳನ್ನು ಪರಿಶೀಲಿಸಲಾಗುತ್ತಿದೆ. ಕೋವಿಯಿಂದ ಅಹಿತಕರ ಘಟನೆಗಳು ನಡೆದಿದ್ದು, ಕೆಲವು ಘಟನೆಗಳಲ್ಲಿ ಮೃತಪಟ್ಟ ಬಳಿಕ ಬಂದೂಕು ನಾಪತ್ತೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಸೂಕ್ತ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕೋವಿ ಪರವಾನಗಿದಾರರ ಪರವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಂದೂಕು ಪರವಾನಗಿದಾರರ ಒಕ್ಕೂಟದ ಸಂಚಾಲಕರಾದ ಜಯಪ್ರಸಾದ್ ಜೋಶಿ ಬೆಳ್ಳಾರೆ ರವರು “ಜಿಲ್ಲೆಯ ಎರಡು ಕಡೆಗಳಲ್ಲಿ ಕೋವಿಯಿಂದ ಸಮಸ್ಯೆ ಆಗಿದೆ ಎಂಬ ಕಾರಣಕ್ಕೆ ಎಲ್ಲರ ಪರವಾನಗಿ ತಡೆ ಹಿಡಿಯುವುದು ಸರಿಯಲ್ಲ, ಪೋಲೀಸ್ ಇಲಾಖೆಯ ಸರ್ವೀಸ್ ರಿವಾಲ್ವರ್ ನಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ನೂರಾರು ವಾಹನ ಅಪಘಾತಗಳು ಸಂಭವಿಸುತ್ತವೆ. ಹಾಗೆಂದು ಇವುಗಳನ್ನೆಲ್ಲಾ ನಿಷೇಧಿಸಲು ಆಗುತ್ತದೆಯೇ..!? ಅಧಿವೇಶನದಲ್ಲಿ ಒಂದು ರೀತಿಯ ಉತ್ತರ, ಜನಸಾಮಾನ್ಯರಿಗೆ ಇನ್ನೊಂದು ರೀತಿಯ ಉತ್ತರ ನೀಡಲಾಗುತ್ತಿದೆ. ಈಗಿನ ಕಾಲದ ಕೋತಿಗಳು ನಕಲಿ ಬಂದೂಕು ಯಾವುದು ಎಂದು ಕಂಡುಹಿಡಿಯುವ ಶಕ್ತಿಯನ್ನು ಹೊಂದಿವೆ. ರೈತರ ಸಮಸ್ಯೆ ಏನೆಂದು ರೈತರಿಗಷ್ಟೇ ಅರ್ಥವಾಗಲು ಸಾಧ್ಯ. ಕಾಡುಪ್ರಾಣಿಗಳ ನಿರಂತರ ದಾಳಿಗಳಿಂದಾಗಿ ಜಿಲ್ಲೆಯ ರೈತರು ವಿಪರೀತ ತೊಂದರೆ ಅನುಭವಿಸುತ್ತಿದ್ದು, ಅದಲ್ಲದೇ ಪ್ರಸ್ತುತ ವಿವಿಧ ರೋಗಗಳಿಂದ ಕೃಷಿ ತೋಟಗಳ ಆದಾಯವೂ ನಿರಂತರವಾಗಿ ಕುಂಠಿತಗೊಳ್ಳುತ್ತಿದ್ದು, ಸರ್ಕಾರ ಆದಷ್ಟು ಬೇಗ ಇತ್ತ ಗಮನಹರಿಸಿ ರೈತರ ಸಂಕಷ್ಟವನ್ನು ಅರಿತುಕೊಂಡು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ರೈತರ ಸಮಸ್ಯೆಗೆ ಅತೀ ಶೀಘ್ರದಲ್ಲಿ ಸೂಕ್ತ ಪರಿಹಾರ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹತ್ತು ಸಾವಿರಕ್ಕೂ ಅಧಿಕ ಮಂದಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ” ಎಂದು ಹೇಳಿದರು. “ಕೋವಿ ಪರವಾನಗಿ ನವೀಕರಣದ ಅರ್ಜಿ ಒಂದು ಬಾರಿ ತಿರಸ್ಕೃತವಾದರೆ ಮತ್ತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ” ಎಂಬ ವಿಷಯವನ್ನು ಕೋವಿ ಪರವಾನಗಿದಾರರು ಸಚಿವರ ಗಮನಕ್ಕೆ ತಂದಿದ್ದು, ಇದಕ್ಕುತ್ತರಿಸಿದ ಸಚಿವರು “ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲದಿದ್ದರೂ ಕೂಡ ಲಿಖಿತವಾಗಿ ಅರ್ಜಿ ಸಲ್ಲಿಕೆ ಮಾಡಬಹುದು” ಎಂದು ತಿಳಿಸುತ್ತಾ “ಹೊಸ ಕೋವಿ ಪರವಾನಗಿ ನೀಡುವ ಸಂದರ್ಭದಲ್ಲಿ ಕಠಿಣ ಕಾನೂನು ನಿಯಮಗಳನ್ನು ಕೈಗೊಳ್ಳಬಹುದು ಆದರೆ ಹಳೆಯ ಪರವಾನಗಿ ನವೀಕರಣದ ಸಂದರ್ಭದಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು” ಎಂಬುದಾಗಿ ಸೂಚನೆ ನೀಡಿ “ಮರು ಪರಿಶೀಲನೆಗೆ ಒಂದು ತಿಂಗಳ ಕಾಲಾವಕಾಶ ನೀಡಿ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading