ಪಂಜ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಬಿಜೆಪಿ ಆರೋಪ: ಕಾಂಗ್ರೆಸ್ ಮುಖಂಡರಿಂದ ತಿರುಗೇಟು

ಸುಳ್ಯ: ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಸುಮಾರು 57 ಗ್ರಾಮಗಳ ಭಕ್ತರು ನಂಬಿಕೊಂಡು ಬರುವ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಬಿಜೆಪಿ ಭಕ್ತರ ಹೆಸರಿನಲ್ಲಿ ಅವ್ಯವಹಾರದ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮಹೇಶ್ ಕರಿಕ್ಕಳ ಆರೋಪಿಸಿದರು.

. . . . . . . . .

ಸುಳ್ಯದ ಪತ್ರಿಕಾ ಭವನದಲ್ಲಿ ಸೆ. 5ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇವಸ್ಥಾನದ ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ನೇತೃತ್ವದ ಸಮಿತಿಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ವಿರುದ್ಧ ಬಿಜೆಪಿ ಎಂಟು ಪ್ರಶ್ನೆಗಳನ್ನು ಮುಂದಿಟ್ಟು ಆ. 15ರಂದು ಸಾರ್ವಜನಿಕ ಸಭೆ ಕರೆದು ಲೆಕ್ಕಪತ್ರ ನೀಡುವಂತೆ ಮನವಿ ಸಲ್ಲಿಸಿತ್ತು. ಅದರಂತೆ ಅಧ್ಯಕ್ಷರು ಸಾರ್ವಜನಿಕ ಸಭೆ ಕರೆದು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಆದರೆ ಸಭೆಯಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು ಎಂದು ಅವರು ಹೇಳಿದರು.

. . . . . . .

ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ ಜಾತ್ರೋತ್ಸವಕ್ಕೆ ವಂತಿಗೆ ನೀಡುವುದಿಲ್ಲ ಹಾಗೂ ಸಹಕಾರ ನೀಡುವುದಿಲ್ಲ ಎಂದು ಸಭೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರನಡೆದಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ರೀತಿಯಲ್ಲಿ ಬರೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಆಡಳಿತ ಮಂಡಳಿ ವಿರುದ್ಧದ ಆರೋಪಗಳಿಗೆ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ದೇವರ ಜಳಕದ ಹೊಳೆಯಲ್ಲಿ ಸ್ನಾನ ಮಾಡಿ ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಸ್ಥಾನದ ಹಣದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಪ್ರಮಾಣ ಮಾಡಿದ್ದಾರೆ ಎಂದು ಮಹೇಶ್ ಕರಿಕ್ಕಳ ತಿಳಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರದಿಂದ ನೇಮಕಗೊಂಡಿದ್ದ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧವೂ ಹಲವು ಭಕ್ತರು ಆರೋಪಗಳನ್ನು ಮಾಡಿದ್ದು, ಲೆಕ್ಕ ಪರಿಶೋಧನೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ನಡೆದಿರುವ ವ್ಯವಹಾರಗಳ ಬಗ್ಗೆಯೂ ಭಕ್ತರಲ್ಲಿ ಸಂಶಯವಿದೆ. ಆದ್ದರಿಂದ 2003-04ನೇ ಸಾಲಿನಿಂದ ಪ್ರಸ್ತುತ ಆಡಳಿತ ಮಂಡಳಿಯವರೆಗಿನ ಸಂಪೂರ್ಣ ಲೆಕ್ಕಪತ್ರಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಲೆಕ್ಕ ಪರಿಶೋಧನೆಗೊಳಪಡಿಸಿ ತನಿಖೆ ನಡೆಸಬೇಕು. ಯಾವುದೇ ಲೋಪ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ರಥಕ್ಕೆ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಬೆತ್ತದ ಬದಲಿಗೆ ಕಬ್ಬಿಣ ಬಳಸಲಾಗಿದೆ. ಇದರಿಂದ ರಥದ ಸ್ವರೂಪಕ್ಕೆ ಧಕ್ಕೆ ಉಂಟಾಗಿದ್ದು, ಧಾರ್ಮಿಕ ಲೋಪವೂ ಸಂಭವಿಸಿದೆ ಎಂದು ಅವರು ಆರೋಪಿಸಿದರು.

ಪಂಜ ಗ್ರಾ. ಪಂ.ಯಲ್ಲಿ ಈ ಹಿಂದೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಪಂಚಾಯಿತಿಯ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ಜಿಲ್ಲಾ ಪಂಚಾಯತ್ ಸಿಇಒ ಅಮಾನತುಗೊಳಿಸಿದ್ದರು. ಈ ಬೆಳವಣಿಗೆ ಹಾಗೂ ಕಾಂಗ್ರೆಸ್ ಪಕ್ಷವು ಈ ಭಾಗದಲ್ಲಿ ಬಲಗೊಳ್ಳುತ್ತಿರುವುದನ್ನು ಸಹಿಸಲಾಗದೆ ಬಿಜೆಪಿ ದೇವಸ್ಥಾನದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಮತ್ತೆ ಸಂಘಟನೆಯಾಗುವ ಪ್ರಯತ್ನ ನಡೆಸುತ್ತಿದೆ ಎಂದು ಮಹೇಶ್ ಕರಿಕ್ಕಳ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅಕ್ರಿಕಟ್ಟೆ, ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ರಜತ್ ಭಟ್ ಹಾಗೂ ಕಾಂಗ್ರೆಸ್ ಮುಖಂಡ ಭವಾನಿಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading