ಸುಳ್ಯದಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ  ಮಳೆಗಾಲದ ಪ್ರಾಕೃತಿಕ ವಿಕೋಪದ ಕುರಿತು ಮುಂಜಾಗ್ರತಾ ಸಭೆ | ಪ್ರತೀ ಗ್ರಾ.ಪಂ. ವ್ಯಾಪ್ತಿಯ ಮಳೆ ಮಾಪನ ಯಂತ್ರ ದುರಸ್ತಿಗೆ ಸಚಿವರ ಸೂಚನೆ

ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಮನಸ್ಸಿನಿಂದಲ್ಲ, ಹೃದಯದಿಂದ ಕೆಲಸ ಮಾಡಬೇಕು. ಆಗ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ. 6ರಂದು ಸುಳ್ಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆ ನಡೆಯಿತು.
ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಅವರು ಮಾತನಾಡಿ, ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಚಿವರಿಗೆ ಮಾಹಿತಿ ನೀಡಿ ಕ್ರಮಕೈಗೊಳ್ಳಿ ಎಂದರು.
ಈ ವೇಳೆ ಸಭೆಯಲ್ಲಿದ್ದ ತಹಶೀಲ್ದಾರ್ ಮಂಜುಳ ಅವರು ತಾಲೂಕಿನ 25 ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳೆ ಮಾಪನ ಯಂತ್ರವು ದುರಸ್ಥಿಯಾಗಬೇಕಿದೆ ಎಂದು ಹೇಳಿದರು.
ಆಗ ಸಚಿವ ಯು.ಟಿ. ಖಾದರ್ ಮಾತನಾಡಿ, “ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಳೆ ಮಾಪನ ಯಂತ್ರಗಳು ಕಾರ್ಯನಿರ್ವಹಿಸುವಂತೆ ಶೀಘ್ರ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಮಳೆ ಮಾಪನ ಯಂತ್ರಗಳು ದುರಸ್ತಿಯಾಗದೆ ಇದ್ದರೆ ಅಧಿಕ ಮಳೆಯ ಪ್ರಮಾಣ ಹಾಗೂ ಸಂಭವನೀಯ ಪ್ರಕೃತಿ ವಿಕೋಪಗಳ ಬಗ್ಗೆ ನಿಖರ ಮಾಹಿತಿ ದೊರೆಯುವುದಿಲ್ಲ. ಇದರಿಂದ ರೈತರಿಗೆ ಬೆಳೆ ವಿಮೆ ಸೇರಿದಂತೆ ವಿವಿಧ ಪರಿಹಾರ ಸೌಲಭ್ಯಗಳನ್ನು ಪಡೆಯುವಲ್ಲಿಯೂ ತೊಂದರೆಯಾಗುತ್ತದೆ” ಎಂದು ತಿಳಿಸಿದರು.
ಹಳೆಯ ಅಂಗನವಾಡಿ – ಶಾಲಾ ಕಟ್ಟಡಗಳ ದುರಸ್ತಿಗೆ ಸೂಚನೆ
ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣವೇ ಪರಿಹಾರ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಅಂಗನವಾಡಿ – ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಶಾಸಕಿ ಭಾಗೀರಥಿ ಮಾತನಾಡಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಹಳೆ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ತಿಳಿಸಿದರು. ತಾಲೂಕು ವ್ಯಾಪ್ತಿಯ ಮಳೆ ಪರಿಸ್ಥಿತಿ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಹಾಗೂ ಇದುವರೆಗೆ ಆದ ಮಳೆ ಹಾನಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

. . . . . . . . .

ಮಳೆ ಹಾನಿಗೆ ಶೀಘ್ರ ಪರಿಹಾರ ಕ್ರಮ: ಜಿಲ್ಲಾಧಿಕಾರಿ ದರ್ಶನ್
ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಪ್ರದೇಶದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲದೇ, ಹಾನಿಗೊಳಗಾದ ಪ್ರದೇಶಗಳ ಮಾಹಿತಿಯನ್ನು ಸಂಗ್ರಹಿಸಿ ತಹಶೀಲ್ದಾರ್ ಅವರಿಗೆ ವರದಿ ನೀಡಬೇಕು. ತಹಶೀಲ್ದಾರ್ ಕಛೇರಿಯಿಂದ ಜಿಲ್ಲಾ ಕೇಂದ್ರಕ್ಕೆ ಬಂದ ವರದಿಯನ್ನು ಆಧರಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

. . . . . . .

ಈ ಸಂದರ್ಭದಲ್ಲಿ ಎಸ್‌ಪಿ ಡಾ. ಕೆ. ಅರುಣ್, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನ . ಪಂ. ಮುಖ್ಯಾಧಿಕಾರಿ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್. ಹರಗಿ, ಪಶು ವೈದ್ಯಾಧಿಕಾರಿ ನಿತಿನ್ ಪ್ರಭು, ಆರೋಗ್ಯಾಧಿಕಾರಿ ಆಶಾ ಅಭಿಕ್ಕಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫಾ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading