ಸುಳ್ಯ ತಾಲೂಕು ಆಸ್ಪತ್ರೆಯ ಆಹಾರ ವಿತರಣೆಯಲ್ಲಿ ತಾರತಮ್ಯ ಆರೋಪ: ಸಿಎಂಗೆ ಡಯಾಲಿಸಿಸ್ ರೋಗಿಗಳು, ಸಿಬ್ಬಂದಿಯಿಂದ ದೂರು

ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳು ಹಾಗೂ ಡಯಾಲಿಸಿಸ್ ರೋಗಿಗಳಿಗೆ ವಿತರಿಸಲಾಗುತ್ತಿರುವ ಆಹಾರದಲ್ಲಿ ತಾರತಮ್ಯ, ಆಹಾರ ದುರುಪಯೋಗ ಹಾಗೂ ಕರ್ತವ್ಯ ಲೋಪ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಆಹಾರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಡಯಾಲಿಸಿಸ್ ರೋಗಿಗಳು ಮತ್ತು ಸಿಬ್ಬಂದಿ ವರ್ಗದವರು ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ನೀಡಲಾಗುವ ಆಹಾರದ ಸೌಲಭ್ಯವನ್ನು ಸಿಬ್ಬಂದಿಗಳಿಗೂ ವಿಸ್ತರಿಸಿರುವುದು ಶ್ಲಾಘನೀಯವಾದರೂ, ಆಹಾರ ತಯಾರಕರಾಗಿ ಕಾರ್ಯನಿರ್ವಹಿಸುತ್ತಿರುವ ‘ಬೇಬಿ’ ಎಂಬವರು ಆಹಾರ ವಿತರಣೆಯಲ್ಲಿ ಬೇದಭಾವ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಯ ಮುಖ್ಯಸ್ಥರು ಅಗತ್ಯವಿರುವ ಡಯಾಲಿಸಿಸ್ ರೋಗಿಗಳು ಹಾಗೂ ಸಿಬ್ಬಂದಿಗೆ ಆಹಾರ ವಿತರಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಕೆಲವರಿಗೆ ಮಾತ್ರ ವಿಶೇಷವಾಗಿ ಆಹಾರ ನೀಡಲಾಗುತ್ತಿದ್ದು, ಉಳಿದ ಆಹಾರವನ್ನು ಅಗತ್ಯವಿರುವವರಿಗೆ ವಿತರಿಸದೆ ಕಸದ ಬುಟ್ಟಿಗೆ ಎಸೆಯಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ರೋಗಿಗಳ ಪೌಷ್ಟಿಕಾಂಶಕ್ಕಾಗಿ ಸರ್ಕಾರದಿಂದ ಒದಗಿಸಲಾಗುವ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಅರ್ಹ ರೋಗಿಗಳಿಗೆ ನೀಡದೆ, ಆಯ್ದ ಸಿಬ್ಬಂದಿಗಳಿಗೆ ಮಾತ್ರ ಹಂಚಲಾಗುತ್ತಿದೆ ಎಂಬ ಆರೋಪವೂ ಮಾಡಲಾಗಿದೆ.
ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳು ಈಗಾಗಲೇ ದೈಹಿಕ ಮತ್ತು ಮಾನಸಿಕವಾಗಿ ಸಂಕಷ್ಟದಲ್ಲಿದ್ದು, ಅವರಿಗೆ ಆಹಾರ ವಿತರಣೆಯಲ್ಲೂ ತಾರತಮ್ಯ ಮಾಡುತ್ತಿರುವುದು ಅಮಾನವೀಯ ನಡೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶಿಸಿ, ಆಸ್ಪತ್ರೆಯ ಮುಖ್ಯಸ್ಥರ ಸೂಚನೆಯನ್ನು ಪಾಲಿಸದೆ ತಾರತಮ್ಯ ಹಾಗೂ ಆಹಾರ ದುರುಪಯೋಗ ಎಸಗುತ್ತಿರುವುದಾಗಿ ಆರೋಪಿಸಲಾದ ಆಹಾರ ತಯಾರಕರ ವಿರುದ್ಧ ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ನೊಂದ ಡಯಾಲಿಸಿಸ್ ರೋಗಿಗಳು ಮತ್ತು ಸಿಬ್ಬಂದಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

. . . . . . . . .

ಈ ಬಗ್ಗೆ ಅಡುಗೆ ಸಿಬ್ಬಂದಿ ಬೇಬಿಯವರನ್ನು ಸಂಪರ್ಕಿಸಿದಾಗ ನಾವು ತಾರತಮ್ಯ ಮಾಡುತ್ತಿಲ್ಲ. ಎಷ್ಟು ಪೇಷೆಂಟ್‌ಗಳು ಇದ್ದಾರೆ ಎಂಬ ಲೆಕ್ಕಾಚಾರದಲ್ಲಿ ಅಡುಗೆ ಪ್ರಮಾಣ ತಯಾರು ಮಾಡುತ್ತೇವೆ. ಕೆಲವೊಂದು ಸಲ ಆಸ್ಪತ್ರೆಯ ಇತರ ಸಿಬ್ಬಂದಿಗಳು ಊಟ ಪಡೆದುಕೊಳ್ಳುತ್ತಾರೆ. ಆಂತಹ ಸಂದರ್ಭದಲ್ಲಿ ಸಾರು ಸಾಂಬಾರು ವ್ಯತ್ಯಾಸ ಆಗಿದ್ದು ಹೌದು. ಇನ್ನೂ ಮುಂದೆ ರೋಗಿಗಳಿಗೆ ಹೊರತುಪಡಿಸಿ ಇತರರಿಗೆ ಯಾವುದೇ ಆಹಾರ ಪದಾರ್ಥ ನೀಡುವುದಿಲ್ಲ ಎಂದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading