ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ವಿಶೇಷ – ಯೋಗಾಸನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಯೋಗ ಪಟು ಅಕ್ಷಯ ಬಾಬ್ಲುಬೆಟ್ಟು – 2025ರ ಯೋಗ ದಿನಾಚರಣೆಯ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಯೋಗ ಪ್ರದರ್ಶನ ನೀಡಿದ ಪ್ರತಿಭೆ – ಬರಹ : ಉಲ್ಲಾಸ್ ಕಜ್ಜೋಡಿ

ಇಂದು ಜೂನ್ 21 “ಅಂತಾರಾಷ್ಟ್ರೀಯ ಯೋಗ ದಿನಾಚರಣೆ.” ಇಂದು ದೇಶಾದ್ಯಂತ ಲಕ್ಷಾಂತರ ಜನರು ಯೋಗಾಸನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಯೋಗ ದಿನಾಚರಣೆಯನ್ನು ಬಹಳ ಗೌರವದಿಂದ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಇದು ಕೇವಲ ಇಂದೊಂದು ದಿನದ ಆಚರಣೆಯಲ್ಲ, ಬದಲಾಗಿ ಇದು ಈಗಿನ ಈ ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕಿನಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜೀವನದುದ್ದಕ್ಕೂ ನಾವು ಅಳವಡಿಸಿಕೊಳ್ಳಲೇಬೇಕಾದಂತಹ ಒಂದು ಜೀವನ ಪದ್ಧತಿ ಅಥವಾ ನಮ್ಮ ಆರೋಗ್ಯಕ್ಕೆ ನಾವು ನೀಡಲೇಬೇಕಾದಂತಹ ದಿವ್ಯೌಷಧವಾಗಿದೆ. ಇಂದು ಈ ಯೋಗಾಸನವನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಈ ಯೋಗಾಸನದ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಯೋಗ ಸಾಧಕರು ನಮ್ಮ-ನಿಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಕೇವಲ ದೊಡ್ಡವರಷ್ಟೇ ಅಲ್ಲ, ಇದೀಗ ಚಿಕ್ಕ ಮಕ್ಕಳು ಕೂಡ ಯೋಗಾಸನದತ್ತ ತಮ್ಮ ಆಸಕ್ತಿಯನ್ನು ತೋರುತ್ತಿದ್ದು, ಬಾಲ್ಯದಲ್ಲೇ ಯೋಗಾಭ್ಯಾಸದ ಮೂಲಕ ಯೋಗಾಸನದ ತರಬೇತಿಯನ್ನು ಪಡೆದು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಶಿಖರವನ್ನು ಏರುತ್ತಿದ್ದಾರೆ. ಅಂತಹ ಒಬ್ಬ ಯೋಗ ಸಾಧಕಿಯ ಸಾಧನೆಯ ಬಗ್ಗೆ ನಾವಿಂದು ಈ “ಯೋಗ ದಿನಾಚರಣೆ”ಯ ವಿಶೇಷ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ…

ಈ ಯೋಗ ಸಾಧಕಿಯ ಹೆಸರು ಅಕ್ಷಯ ಬಾಬ್ಲುಬೆಟ್ಟು. ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಬಾಲಾಡಿ ಮನೆ ಬಾಬ್ಲುಬೆಟ್ಟು ಶ್ರೀ ಮೋಹನ್ ಕುಮಾರ್ ಹಾಗೂ ಶ್ರೀಮತಿ ದಿವ್ಯ ಕುಮಾರಿ ದಂಪತಿಗಳ ಪುತ್ರಿಯಾಗಿರುವ ಇವರು ಬಾಲ್ಯದಿಂದಲೇ ಯೋಗಾಸನದಲ್ಲಿ ಆಸಕ್ತಿಯನ್ನು ಹೊಂದಿದ್ದು, ತಂದೆ, ತಾಯಿ ಹಾಗೂ ಸಹೋದರ ಆದಿತ್ಯ ಅವರ ಪ್ರೋತ್ಸಾಹದೊಂದಿಗೆ ಯೋಗ ಗುರುಗಳು ಹಾಗೂ ರಾಷ್ಟ್ರ ಮಟ್ಟದ ಯೋಗಾಸನ ತೀರ್ಪುಗಾರರಾದ ಶರತ್ ಮರ್ಗಿಲಡ್ಕ ಅವರ ನಿರಂತರ ಯೋಗ ಕೇಂದ್ರದಲ್ಲಿ ಯೋಗ ತರಬೇತಿಯನ್ನು ಪಡೆಯುತ್ತಿದ್ದು, ಪ್ರಸ್ತುತ ಕಡಬದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 06ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಯೋಗಾಭ್ಯಾಸದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಇವರು “ಹನುಮಾನಾಸನದಲ್ಲಿ ಒಂದೇ ಸ್ಥಿತಿಯಲ್ಲಿ ಸುಮಾರು 50 ನಿಮಿಷ 20 ಸೆಕೆಂಡುಗಳ ಕಾಲ ಇರುವ ಮೂಲಕ Worldwide Book of Record ಹಾಗೂ London Book of Record ನಲ್ಲಿ ವಿಶ್ವ ದಾಖಲೆ ಪಡೆದುಕೊಂಡಿದ್ದಾರೆ.” ಅಷ್ಟೇ ಅಲ್ಲದೇ “Global World Record, Nova Book of Record, Asian Book of World Record ಹಾಗೂ International Yoga Book of Record” ವಿಶ್ವ ದಾಖಲೆಗಳನ್ನು ಪಡೆದುಕೊಂಡಿರುವ ಇವರು ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಸ.ಹಿ.ಪ್ರಾ ಶಾಲೆ ಬಿಳಿನೆಲೆಬೈಲು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಡಬ, ಶಿರಾಡಿ, ಸುಬ್ರಹ್ಮಣ್ಯ ಉಪಕೇಂದ್ರಗಳ ಹಾಗೂ ಆಹ್ವಾನಿತ ತಂಡಗಳ ಬಿಳಿನೆಲೆಬೈಲು ಪ್ರಾಥಮಿಕ ಶಾಲೆಯಲ್ಲಿ ನಡೆದ “2024-25ನೇ ಸಾಲಿನ ಅಂತರ್ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ”ಯಲ್ಲಿ, ಕರ್ನಾಟಕ ಸರ್ಕಾರದ ಯೋಗ ದಸರಾ ಉಪಸಮಿತಿಯ ವತಿಯಿಂದ ಮೈಸೂರಿನಲ್ಲಿ ನಡೆದ “2024ನೇ ಸಾಲಿನ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ”ಯ 08 ರಿಂದ 10 ವರ್ಷಗಳ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ, ಬೆಂಗಳೂರಿನ ಗಂಗಾ ಇಂಟರ್‌ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ “2024ನೇ ಸಾಲಿನ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್”ನ 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, ಶ್ರೀ ವೀರಮಾರುತಿ ಸೇವಾ ಟ್ರಸ್ಟ್(ರಿ.) ಮೂಡಬಿದ್ರೆ ಇದರ ಆಶ್ರಯದಲ್ಲಿ ಯೋಗಶ್ರೀ ಯೋಗ ಬಳಗ ಮಂಗಳೂರು ಇದರ ಸಹಯೋಗದೊಂದಿಗೆ 2024ರಲ್ಲಿ 35ನೇ ವರ್ಷದ ಮೂಡುಬಿದಿರೆ ಶ್ರೀ ಶಾರದೋತ್ಸವದ ಅಂಗವಾಗಿ ನಡೆದ “ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ”ಯ ಕಿರಿಯ ಪ್ರಾಥಮಿಕ ಬಾಲಕಿಯರ(01 ರಿಂದ 04ನೇ ತರಗತಿ) ವಿಭಾಗದಲ್ಲಿ, ಕರ್ನಾಟಕ ರತ್ನ ಡಾ| ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಸಂಸ್ಥೆ ಹಾಗೂ ಆಚಾರ್ಯ ಯೋಗ ಯೂತ್ ಕ್ಲಬ್(ರಿ.) ಜಂಟಿ ಆಶ್ರಯದಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ “03ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆ”ಯ 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, ರೆನ್ಶಿ ಯೋಗ ಸಂಸ್ಥೆ ದುಬೈ ಯು.ಎ.ಇ ಹಾಗೂ ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಸಂಸ್ಥೆ ಬೆಂಗಳೂರು ಇವುಗಳ ಸಹಯೋಗದೊಂದಿಗೆ 2025ರಂದು ದುಬೈನಲ್ಲಿ ನಡೆದ “ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ”ಯಲ್ಲಿ, ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಡಬ, ಶಿರಾಡಿ, ಸುಬ್ರಹ್ಮಣ್ಯ ಇದರ ಉಪಕೇಂದ್ರಗಳ ಹಾಗೂ ಆಹ್ವಾನಿತ ತಂಡಗಳ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ನಡೆದ ಹಿರಿಯ ಪ್ರಾಥಮಿಕ ವಿಭಾಗದ “2025-26ನೇ ಸಾಲಿನ ಅಂತರ್ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ”ಯಲ್ಲಿ, ಕುಂಡಲಿನಿ ಯೋಗ ಶಾಲೆ ಬೆಂಗಳೂರು ಇದರ ವತಿಯಿಂದ ನಡೆದ “2025ನೇ ಸಾಲಿನ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ”ಯ 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ವತಿಯಿಂದ ನಡೆದ ವೈಯುಕ್ತಿಕ ಹಾಗೂ ಜೋಡಿ ವಿಭಾಗದ “2025ನೇ ಸಾಲಿನ ಕಲಾತ್ಮಕ ಯೋಗ ಸ್ಪರ್ಧೆ”ಯಲ್ಲಿ, ಆದಿತ್ಯ ಸಾಯಿ ಯೋಗ ಕೇಂದ್ರ ಹಾಗೂ ಶಿವಜ್ಯೋತಿ ಯೋಗ ಕೇಂದ್ರ ಬೆಂಗಳೂರು ಇದರ ವತಿಯಿಂದ ನಡೆದ “2025ನೇ ಸಾಲಿನ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ”ಯ 08 ರಿಂದ 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ “2026ನೇ ಸಾಲಿನ ಯೋಗಾಸನ ಸ್ಪರ್ಧೆ”ಯ 05 ಮತ್ತು 06ನೇ ತರಗತಿ ಬಾಲಕಿಯರ ವಿಭಾಗದಲ್ಲಿ ಹಾಗೂ ಫೈವ್ ಸ್ಟಾರ್ ವೆಲ್‌ಫೇರ್ ಸ್ಪೋರ್ಟ್ಸ್ ಕ್ಲಬ್ ಪಂಜಾಬ್ ಹಾಗೂ ಯೋಗಾಸನ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ “2026ನೇ ಸಾಲಿನ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ”ಯ 12 ವರ್ಷದೊಳಗಿನ ವಿಭಾಗದಲ್ಲಿ ಹೀಗೆ ಒಟ್ಟು 12 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಿ.ಕೆ.ಎಸ್ ಅಯ್ಯಂಗಾರ್ ಸ್ಮರಣಾರ್ಥ ನಡೆದ “2023ನೇ ಸಾಲಿನ 07ನೇ ವರ್ಷದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್”ನಲ್ಲಿ, ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ವತಿಯಿಂದ ನಡೆದ “ಯೋಗಾಸನ ಸ್ಪರ್ಧೆಯ ಸಾಂಪ್ರದಾಯಿಕ ವಿಭಾಗ”ದಲ್ಲಿ ಒಟ್ಟು 02 ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುವ ಇವರು ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯು ಆಯೋಜಿಸಿದ “2024ನೇ ಸಾಲಿನ 15ನೇ ಮುಕ್ತ ಚಾಂಪಿಯನ್‌ಶಿಪ್”ನ 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ, ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್(ರಿ.) ಶಿವಮೊಗ್ಗ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವುಗಳ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ| ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ 2024ರಲ್ಲಿ ಶಿವಮೊಗ್ಗದ ವಾಸವಿ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ “06ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆ”ಯಲ್ಲಿ 08 ರಿಂದ 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹಾಗೂ ಸ್ನೇಹ ಸಂಗಮ ಯೋಗ ಬಳಗ(ರಿ.) ಹಾಗೂ ಪತಂಜಲಿ ಯೋಗ ಕೇಂದ್ರ ಮತ್ತು ಭುವನ್ ರಾಜ್ ಫೌಂಡೇಶನ್ ಮೈಸೂರು ಇವುಗಳ ಸಹಯೋಗದೊಂದಿಗೆ 2025ರಲ್ಲಿ ಮೈಸೂರಿನಲ್ಲಿ ನಡೆದ “ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ”ಯ 08 ರಿಂದ 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಒಟ್ಟು 03 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ 2023ರಲ್ಲಿ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಡೆದ “ಯೋಗಾಸನ ಚಾಂಪಿಯನ್‌ಶಿಪ್” ನಲ್ಲಿ 09 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 06ನೇ ಸ್ಥಾನ ಪಡೆದಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ ನಡೆದ “2026ನೇ ಸಾಲಿನ ಡಬ್ಲ್ಯೂ.ಎಫ್.ಎಫ್ ಕರ್ನಾಟಕ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ”ಯಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 8ನೇ ಸ್ಥಾನ ಗಳಿಸಿ ಉತ್ತರಾಖಂಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಯೋಗಾಸನದ ಹಾದಿಯಲ್ಲಿ ಇಷ್ಟೊಂದು ಸಾಧನೆಗಳನ್ನು ಮಾಡಿರುವ ಅಕ್ಷಯಳ ಈ ಸಾಧನೆಗೆ ಮತ್ತೊಂದು ಗರಿ ಎಂಬಂತೆ “2025ರಲ್ಲಿ ಇವರು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಸಚಿವರ ಸಮ್ಮುಖದಲ್ಲಿ ಯೋಗ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.”

ಇವರು ಚಿಕ್ಕ ವಯಸ್ಸಿನಲ್ಲಿಯೇ ಯೋಗ ಕ್ಷೇತ್ರದಲ್ಲಿ ಮಾಡಿದಂತಹ ಈ ಎಲ್ಲಾ ಸಾಧನೆಗಳಿಗೆ “2024ನೇ ಸಾಲಿನ ಯೋಗ ಕಿಡ್ಸ್ ಅವಾರ್ಡ್” ಹಾಗೂ ರಾಸಾ ಕನ್ನಡ ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್(ರಿ.)ನ “ಜನನಿ ರಕ್ಷಾ ಮಹಿಳಾ ಸಾಧಕಿ” ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರ, ಸನ್ಮಾನ-ಗೌರವಗಳು ಲಭಿಸಿದ್ದು, ಇವರ ಈ ಯೋಗ ಸಾಧನೆಯ ಪಯಣವು ಇದೇ ರೀತಿ ನಿರಂತರವಾಗಿ ಸಾಗುತ್ತಲೇ ಇರಲಿ ಎನ್ನುವ ಶುಭ ಹಾರೈಕೆಯೊಂದಿಗೆ ಯೋಗ ದಿನಾಚರಣೆಯ ಈ ವಿಶೇಷ ಬರಹಕ್ಕೆ ಪೂರ್ಣವಿರಾಮವನ್ನಿಡುತ್ತಿದ್ದೇವೆ… ಬರಹ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading