ಮನುಷ್ಯನ ದೇಹವನ್ನು ಬಿಟ್ಟು ಹೊರಟ ಆತ್ಮವು ಯೋಚಿಸುವುದು “ನಾನೇನು ಸಾಧಿಸಿದೆ ಬದುಕಿನಲ್ಲಿ ಇಂದು, ಬದುಕಿನ ಪ್ರತಿಕ್ಷಣವೂ ಸ್ವಾರ್ಥದಿಂದಲೇ ಜೀವಿಸಿದೆ ಎಂದು…
ಕಣ್ಣೆದುರೇ ಕಷ್ಟದಲ್ಲಿದ್ದವರ ಕಡೆಗಣಿಸಿದ ದುಷ್ಟನು ನಾನು, ದುಃಖದಿಂದ ಅಳುತ್ತಿದ್ದವರ ಕಣ್ಣೀರ ನೋಡಿಯೂ ನೋಡದಂತೆ ದೂರ ಹೋದವನು ನಾನು…
ಬದುಕಿನುದ್ದಕ್ಕೂ ಸ್ವಾರ್ಥಸಾಧನೆಗಾಗಿಯೇ ಬದುಕಿದ ಪಾಪಾತ್ಮನು ನಾನು, ಪುಣ್ಯದ ಬೆಲೆಯನ್ನು ಅರಿಯದ, ನಿಸ್ವಾರ್ಥದ ಅರ್ಥವನ್ನೂ ತಿಳಿಯದ ಪರಮಸ್ವಾರ್ಥಿಯು ನಾನು…
ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎನ್ನುವ ಭ್ರಮೆಯಲ್ಲೇ ಬದುಕಿದ ದುರಹಂಕಾರಿಯು ನಾನು, ನಾನು-ನನ್ನವರೆನ್ನುವ ಭಾವನೆಯೇ ಇಲ್ಲದ ಕಲ್ಲು ಹೃದಯದವನು ನಾನು…
ಬದುಕಿನುದ್ದಕ್ಕೂ ಪಾಪಕಾರ್ಯಗಳನ್ನೇ ಮಾಡಿದ ಪರಮಪಾಪಿಯು ನಾನು, ಪುಣ್ಯದ ಬೆಲೆಯನ್ನೇ ಅರಿಯದ ಮಹಾಪಾಪಿಯು ನಾನು…
ಈ ಜಗದಿ ಪ್ರತಿಯೊಬ್ಬರ ತಪ್ಪುಗಳಿಗೂ ಶಿಕ್ಷೆಯೆಂಬುವುದು ಇಹುದು, ಪಾಪದ ಕೊಡವು ತುಂಬಿದಾಗ, ತಪ್ಪಿನ ಅರಿವಾದಾಗ ಸಮಯವು ಮೀರಿ ಹೋಗುವುದು, ಈ ಬದುಕು ಕೊನೆಯಾಗುವುದು…
ಮುಂದಿನ ಜನ್ಮದಲ್ಲಾದರೂ ಈ ಜನ್ಮದ ತಪ್ಪುಗಳ ತಿದ್ದಿಕೊಂಡು ಬದುಕುವೆನು ನಾನು, ಸ್ವಾರ್ಥವನ್ನು ಬಿಟ್ಟು, ಅಹಂಕಾರವನ್ನು ತೊರೆದು ನೊಂದವರ ಕಣ್ಣೀರ ಒರೆಸುವೆನು ನಾನು” ಎನ್ನುತ್ತಾ ಆ ಆತ್ಮವು ಮನುಷ್ಯನ ದೇಹವನ್ನು ಬಿಟ್ಟು ಹೊರಟುಹೋಯಿತು ತನ್ನ ತಪ್ಪುಗಳಿಗೆ ಪಶ್ಚಾತ್ತಾಪವಪಡುತ್ತಾ…
✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024