ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ಗೊಡೆಯು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದ್ದು, ಇಂದೋ ನಾಳೆಯೋ ಬೀಳುವಂತಿದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಶಾಸಕ ಎಸ್. ಅಂಗಾರರ ಮುತುವರ್ಜಿಯಲ್ಲಿ ಮಳೆಹಾನಿ ಪರಿಹಾರ ನಿಧಿಯಲ್ಲಿ ಸುಮಾರು 7 ಲಕ್ಷ ರೂಪಾಯಿಗಳಲ್ಲಿ ದುರಸ್ತಿ ಮಾಡಲು ಹಣ ಮಂಜುರಾಗಿ, ಎಂಜಿನಿಯರಿಂಗ್ ವಿಭಾಗಕ್ಕೆ ಬಂದಿತ್ತು. ಅದು ಹಿಂದಕ್ಕೆ ಹೋಗಬಾರದು ಎಂಬ ನೆಲೆಯಲ್ಲಿ ಪಂಚಾಯತ್ ಗೆ ವರ್ಗಾವಣೆ ಮಾಡಿ ಇಟ್ಟಿದ್ದರು ಇದೀಗ ಟೆಂಡರ್ ಪ್ರಕ್ರಿಯೆ ನಡೆಸುವ ಸಲುವಾಗಿ ಪಂಚಾಯತ್ ಎಂಜಿನಿಯರಿಂಗ್ ವಿಭಾಗಕ್ಕೆ ಹಣವನ್ನು ನೀಡಲಾಗಿತ್ತು. ನೂತನ ಸಿದ್ದರಾಯ್ಯರ ಸರಕಾರದ ಆದೇಶದನ್ವಯ ಹೊಸ ಕಾಮಾಗಾರಿಗಳು ಮಾಡಬಾರದು ಎಂಬ ಹಿನ್ನಲೆಯಲ್ಲಿ ಇದೀಗ ವಿದ್ಯಾರ್ಥಿಗಳು ಅಕ್ಷರ ದಾಸೋಹ ಕಟ್ಟಡದಲ್ಲಿ ನೆಲದಲ್ಲಿ ಕುಳಿತು ಪಾಠ ಪ್ರವಚನ ಕೇಳುತ್ತಿದ್ದು, ವಿದ್ಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆ ಉದ್ಬವಿಸಿದ್ದು ಮಕ್ಕಳು ಶಾಲೆಗೆ ಗೈರು ಹಾಜರಾಗುತ್ತಿದ್ದಾರೆ ಎಂದ ತಿಳಿದುಬಂದಿದೆ. ಗೋಡೆಗಳು ಬಿದ್ದರೇ ಎಂಬ ಭಯ ಕೂಡ ಪೋಷಕರನ್ನು ಕಾಡುತ್ತಿದೆ.
ಈ ಹಿಂದೆಯೇ ಸರಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ದೊಡ್ಡೇರಿ ಶಾಲೆಗೆ ಸುಮಾರು 7 ಲಕ್ಷ ಮತ್ತು ದೊಡ್ಡೇರಿ ತೂಗು ಸೇತುವೆಗೆ 15 ಲಕ್ಷ ಮಂಜೂರಾತಿ ಆಗಿರುತ್ತದೆ ಅದನ್ನು ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಾಗಾರಿ ನಡೆಸಬೇಕಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಹೇಳಿದರು.
ಎಂಜಿನಿಯರ್ ಮಣಿಕಂಠ ಮಾತನಾಡಿ ನಮಗೆ 5 ಲಕ್ಷದ ಒಳಗಿನ ಬಜೆಟ್ ಆದರೇ ಟೆಂಡರ್ ಮಾಡದೇ ಕೆಲಸ ಮಾಡಬಹುದಾಗಿದೆ. ಆದರೇ ಶಾಲೆಗೆ 7 ಹಾಗೂ ತೂಗುಸೇತುವೆಗೆ 15 ಲಕ್ಷ ಮಳೆಹಾನಿಯಲ್ಲಿ ಬಂದಿರುತ್ತದೆ. ಸರಕಾರ ನಮಗೆ ಟೆಂಡರ್ ಪ್ರಕ್ರಿಯೆಗೆ ಆದೇಶ ನೀಡಿದ ತಕ್ಷಣ ಕಾಮಗಾರಿ ಮಾಡಿಸುತ್ತೇವೆ ಎಂದು ಹೇಳಿದರು.
ಜನ ಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ದೇಶದ ಸಂಪತ್ತಾಗಿರುವ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವದ ಜೊತೆ ಚೆಲ್ಲಾಟವಾಡದೇ ಮಕ್ಕಳಿಗೆ ಬೆಂಚು ಡೆಸ್ಕ್ ಗಳಲ್ಲಿ ಕುಳಿತು ಪಾಠ ಪ್ರವಚನ ಕೇಳುವಂತಾಗಲಿ ಎಂಬುದೇ ನಮ್ಮ ಆಶಯ.