ಹಸಿರೊಡಲ ಮಡಿಲಲ್ಲಿ ಚಿಗುರೊಡೆದ ಸಸ್ಯವದು ಯಾರೆಷ್ಟೇ ತುಳಿದರೂ ಜಗ್ಗದೆಯೇ ನಿಂತಿತ್ತು, ಬೆಳೆದು ಹೆಮ್ಮರವಾಗುವ ಕನಸನ್ನು ಹೊತ್ತು…
ಪ್ರತಿದಿನವೂ, ಪ್ರತಿಕ್ಷಣವೂ ಬಿರುಬಿಸಿಲಿನ ಶಾಖವನು ತಡೆದು ನಿಂತಿತ್ತು, ಬಿರುಗಾಳಿಯ ಆ ಬಿರುಸಿಗೂ ಬಗ್ಗದೆಯೇ ನಿಂತಿತ್ತು, ದೃಢತೆಯಿಂದ, ಆತ್ಮವಿಶ್ವಾಸದಿಂದ ಹೆಮ್ಮರವಾಗುವ ಕನಸನ್ನು ಹೊತ್ತು…
ತನ್ನೊಳಗಿನ ಆ ನಂಬಿಕೆಯಿಂದಲೇ, ಆತ್ಮವಿಶ್ವಾಸದಿಂದಲೇ ಆ ಗಿಡವು ಇಂದು ಮರವಾಗಿ ಬೆಳೆದಿತ್ತು, ಅಂದು ತುಳಿದು ಸಾಗಿದವರಿಗೆ ಇಂದು ನೆರಳಾಗಿ ನಿಂತಿತ್ತು…
ಮರಗಿಡಕ್ಕೂ ತಪ್ಪದ ಕಷ್ಟಗಳ ಸರಮಾಲೆ ನಮಗಿಲ್ಲಿ ತಪ್ಪುವುದೇ…? ಹುಲುಮಾನವರು ನಾವು…
ಬದುಕಿನಲ್ಲಿ ಕಷ್ಟಗಳು ಬಾರದಿರಲಿ ಎನ್ನಲು ನಾವ್ಯಾರು…? ಹಾಗಾಗಿ ಕಷ್ಟಗಳು ಬರುತ್ತಿರಲಿ, ಆದರೆ ಆ ಮರದಂತೆ ಬೆಳೆಯುವ ಕನಸು ನಮ್ಮದಾಗಿರಲಿ, ಆ ಮರದಲ್ಲಿ ಇದ್ದಂತಹ ಆತ್ಮವಿಶ್ವಾಸ ನಮ್ಮಲ್ಲೂ ಇರಲಿ…
✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024