ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರ ಕ್ಕೆ ಜುಲೈ 25 ರಂದು ಎ.ಸಿ ಗಿರೀಶ್ ನಂದನ್ ಅವರು ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ನೆಟ್ ವರ್ಕ್ ಸಮಸ್ಯೆಯ ಬಗ್ಗೆ ಎ.ಸಿ ಯವರಿಗೆ ತಿಳಿಸಿದ್ದರು. ತಕ್ಷಣ ಬಿ.ಎಸ್.ಎನ್.ಎಲ್ ಟವರ್ ಬಳಿ ತೆರಳಿದ ಎ.ಸಿ ಯವರು ಬಿ.ಎಸ್.ಎನ್.ಎಲ್ ಅಧಿಕಾರಿಗಳನ್ನು ಸಂಪರ್ಕಿಸಿ ಕೊಲ್ಲಮೊಗ್ರ ಹಾಗೂ ಹರಿಹರದ ಟವರ್ ಗೆ ಹೊಸ ಬ್ಯಾಟರಿ ಅಳವಡಿಸುವಂತೆ ಹಾಗೂ ಈಗಲೇ ಸ್ಥಳಕ್ಕೆ ಬರುವಂತೆ ಸೂಚಿಸಿದ್ದರು.
ಸ್ಥಳಕ್ಕೂ ಬಾರದೇ, ಬ್ಯಾಟರಿ ಅಳವಡಿಸದೇ ತನ್ನ ಸೂಚನೆಯನ್ನು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಎಸಿ ನಂದನ್ ಬಿಸಿ ಮುಟ್ಟಿಸಿದ್ದರು.
ಕೂಡಲೇ ಎಚ್ಚೆತ್ತಾ ಬಿ.ಎಸ್.ಎನ್.ಎಲ್ ಅಧಿಕಾರಿಗಳು ಜುಲೈ 26 ರಂದು ಹರಿಹರ ಹಾಗೂ ಕೊಲ್ಲಮೊಗ್ರ ಟವರ್ ಗೆ ಬ್ಯಾಟರಿ ಅಳವಡಿಸಿದ್ದು, ನಾಲ್ಕು ದಿನಗಳಿಂದ ನೆಟ್ವರ್ಕ್ ಇಲ್ಲದೇ ತೊಂದರೆಗೆ ಸಿಲುಕಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಬಿ.ಎಸ್.ಎನ್.ಎಲ್ ಅಧಿಕಾರಿಗಳು ಕೊಲ್ಲಮೊಗ್ರ ಕ್ಕೆ ಬರುತ್ತಿದ್ದಂತೆ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಉದಯ ಶಿವಾಲ “ಎಲ್ಲಾ ಇಲಾಖೆಯ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದು, ನಿಮ್ಮ ಇಲಾಖೆಯವರಿಗೆ ಸಾಕಷ್ಟು ಬಾರಿ ಕರೆ ಮಾಡಿ ಬ್ಯಾಟರಿ ಅಳವಡಿಸುವಂತೆ ಕೇಳಿದ್ದರೂ, ಬ್ಯಾಟರಿ ಹಣ ನಾವು ನೀಡುತ್ತೇವೆ ಎಂದರೂ ಸ್ಥಳಕ್ಕೆ ಬಾರದೇ ನಿನ್ನೆಯಿಂದ ಕರೆಯನ್ನೂ ಸ್ವೀಕರಿಸದೇ ಇರುವ ಕಾರಣ ತಿಳಿಸಿ” ಎಂದು ಪ್ರಶ್ನಿಸಿದರು. “ನಿಮಗೆ ಒಬ್ಬ ಕೆ.ಎ.ಎಸ್ ಅಧಿಕಾರಿ ಹೇಳಿದರೂ ಇಲ್ಲಿನ ಪರಿಸ್ಥಿತಿ ನಿಮಗೆ ಅರ್ಥವಾಗುವುದಿಲ್ಲ. ಮತ್ತೆ ನಿಮಗೆ ನಮ್ಮಂತಹ ಸಾಮಾನ್ಯ ಜನರು ಹೇಳಿ ಪ್ರಯೋಜನವೇನು? ನಿಮ್ಮಲ್ಲಿ ಹಣ ಕೇಳಲಿಲ್ಲ, ಇಲಾಖೆ ನೀಡಿರುವ ಜವಾಬ್ದಾರಿ ಕೆಲಸವನ್ನು ಮಾಡಿ ಅಷ್ಟೇ ಸಾಕು” ಎಂದು ಹೇಳಿದರು. “ಮಾಧ್ಯಮಗಳು ಇಷ್ಟೆಲ್ಲಾ ವರದಿಗಳನ್ನು ಪ್ರಸಾರ ಮಾಡಿದರೂ ನಿಮಗೆ ತಿಳಿಯುತ್ತಿಲ್ಲವೇ…? ನಮಗೆ ಇಂದು ನೆಟ್ ವರ್ಕ್ ಸಮಸ್ಯೆ ಬಗೆಹರಿಸಿ ಬ್ಯಾಟರಿ ಅಳವಡಿಸಿ ಎಲ್ಲಾ ಸಮಸ್ಯೆ ಬಗೆಹರಿಸಿದ ನಂತರ ನೀವು ಇಲ್ಲಿಂದ ತೆರಳಲು ಅವಕಾಶ ನೀಡುತ್ತೇವೆ. ಇಲ್ಲದಿದ್ದರೆ ಇಲ್ಲಿಂದ ತೆರಳಲು ಬಿಡುವುದಿಲ್ಲ. ಕರೆ ಮಾಡಿ ನಿಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ” ಎಂದು ಬಿ.ಎಸ್.ಎನ್.ಎಲ್ ಅಧಿಕಾರಿಗಳ ಜೊತೆ ಹೇಳಿದರು.
ಗ್ರಾಮ ಒನ್ ಕೇಂದ್ರದ ಮುಂದೆ ನೆಟ್ ವರ್ಕ್ ಇಲ್ಲದೇ ಸಾಲಾಗಿ ನಿಂತಿರುವ ಜನರನ್ನು ತೋರಿಸಿಕೊಟ್ಟು, ಪರಿಸ್ಥಿತಿ ನಿಮ್ಮ ಕಣ್ಣ ಮುಂದೆ ಕಾಣುತ್ತಿದೆ ಅಲ್ಲವೇ ಎಂದು ಹೇಳಿದರು.
ಯಾವುದಕ್ಕೂ ಉತ್ತರಿಸದೇ ಮೌನವಾಗಿ ವಾಹನದಲ್ಲಿ ಕುಳಿತ ಅಧಿಕಾರಿಗಳು “ಸಮಸ್ಯೆ ಬಗೆಹರಿಸಿಯೇ ನಾವು ಇಲ್ಲಿಂದ ತೆರಳುತ್ತೇವೆ” ಎಂದು ತಿಳಿಸಿದರು. ನಂತರ ಸಮಸ್ಯೆಗಳನ್ನು ಬಗೆಹರಿಸಿ ಬ್ಯಾಕ್ ಅಪ್ ಬ್ಯಾಟರಿಗೆ ಮೇಲಾಧಿಕಾರಿಗಳಿಗೆ ತಕ್ಷಣ ಪತ್ರ ಬರೆದು ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ಕೊನೆಗೂ ಸದ್ಯಕ್ಕೆ ನೆಟ್ ವರ್ಕ್ ಸಮಸ್ಯೆ ಬಗೆಹರಿದಿದೆ ಎಂದು ತಿಳಿದುಬಂದಿದೆ.