
ಕಳೆದ ವಿಧಾನಸಭೆ ಚುನಾವಣೆಯ ಖರ್ಚು ವೆಚ್ಚ ಎಷ್ಟಾಗಿರಬಹುದು. ಜನರ ತೆರಿಗೆಯ ಹಣದಲ್ಲಿ ಚುನಾವಣೆಗಾಗಿ ಆಯೋಗ ಎಷ್ಟು ಖರ್ಚು ಮಾಡುತ್ತಿದೆ. ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ಆರ್.ಟಿ.ಐ. ಕಾರ್ಯಕರ್ತ ಚುನಾವಣಾ ಆಯೋಗ ಮಾಹಿತಿ ಹಕ್ಕು ಕಾಯಿದೆಯ ಅಡಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರಿಸಿದ ಆಯೋಗ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಎಪ್ಪತ್ತೇಳು ಕೋಟಿ ನಲವತ್ತೆಂಟು ಲಕ್ಷದ ನಲವತ್ತೊಂದು ಸಾವಿರದ ಎಪ್ಪತ್ತೊಂದು ರೂ.ಗಳನ್ನು (77,48,41,071/-) ಖರ್ಚು ಮಾಡಲಾಗಿದೆ. ಹಾಗೂ ಬೆಂಗಳೂರು ನಗರ ಸೇರಿ 34 ಜಿಲ್ಲೆಗಳಿಗೆ ಒಟ್ಟು ಇನ್ನೂರ ಎಂಬತ್ತು ಕೋಟಿ ಮೂವತ್ತೆರಡು ಲಕ್ಷದ ಏಳು ಸಾವಿರದ ಮುನ್ನೂರ ಎಂಬತ್ತು (280,32,07,380/-) ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನ ದಲ್ಲಿ ಜಿಲ್ಲಾಮಟ್ಟದಲ್ಲಿ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಒದಗಿಸಲು ಸೂಚಿಸಲಾಗಿದೆ . ಜಿಲ್ಲಾಧಿಕಾರಿಗಳಿಂದ ಖರ್ಚು ವೆಚ್ಚಗಳ ಬಗ್ಗೆ ವರದಿ ಬಂದ ಬಳಿಕ ಸಂಪೂರ್ಣ ಖರ್ಚು ವೆಚ್ಚದ ವಿವರ ನೀಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಆರ್ ಟಿ.ಐ ಕಾರ್ಯಕರ್ತ ಡಿ.ಎಂ. ಶಾರೀಖ್ ಅಮರ ಸುದ್ದಿಗೆ ತಿಳಿಸಿದ್ದಾರೆ.
