ಸುಳ್ಯದ ಜ್ಯೋತಿ ವೃತ್ತದ ಬಳಿಯ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಬರೆ ಜರಿದು ವಿದ್ಯಾರ್ಥಿನಿಯರ ಶೌಚಾಲಯ ಬಾಗಿಲು ಸಂಪೂರ್ಣವಾಗಿ ಮುಚ್ಚಲಾಗಿದೆ. ರಜೆ ಮುಗಿದ ಮೇಲೆ ವಿದ್ಯಾರ್ಥಿನಿಯರ ಪಾಡೇನು ಎಂಬ ಪ್ರಶ್ನೆ ಉದ್ಬವಿಸಿದೆ. ತಾಲೂಕು ಆಡಳಿತದ ಸಮೀಪದಲ್ಲೇ ಇರುವ ಶಾಲೆಗೆ ಇಂತಹ ದುಸ್ಥಿತಿಯಾದರೇ ಬೇರೆ ಶಾಲೆಗಳ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಮಾಹಿತಿ ಪಡೆದ ಶಾಸಕಿ ಭಾಗೀರಥಿ ಮುರುಳ್ಯ, ತಾಲೂಕು ಪಂಚಾಯತ್ ಇಓ ಭವಾನಿಶಂಕರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಹೆಚ್ ಸುಧಾಕರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೀಘ್ರ ಕ್ರಮ ವಹಿಸಲು ಅಧಿಕಾರಿಗಳಿಗೆ ಶಾಸಕಿ ಹಾಗೂ ಇಒ ಸೂಚನೆ ನೀಡಿದರು.
ಸುಮಾರು ನೂರು ವರುಷಗಳ ಇತಿಹಾಸವಿರುವ ಸರಕಾರಿ ಶಾಲೆಯ ಮೇಲ್ಚಾವಣಿ ಸೋರುತ್ತಿದ್ದು ಕೊಠಡಿಗಳಲ್ಲಿ ನೀರು ಸೋರುತ್ತಿದೆ. ಮೇಲ್ಚಾವಣಿಯಲ್ಲಿ ಕಬ್ಬಿಣದ ರಾಡ್ ಗಳು ಕಾಣಿಸುತ್ತಿದ್ದು ಕೇವಲ ಹತ್ತು ವರ್ಷಗಳ ಒಂದು ಕಟ್ಟಡ ಇಂತಹ ಒಂದು ದುಸ್ಥಿತಿಗೆ ಕಾರಣವಾಗಿದೆ. ಬರೆ ಕುಸಿತದಿಂದ ಶೌಚಾಲಯಕ್ಕೆ ಸಮಸ್ಯೆಯಾಗಿದೆ.
ತಕ್ಷಣವೇ ಅಧಿಕಾರಿಗಳಿಗೆ ಎಂಜಿನಿಯರಿಂಗ್ ವಿಭಾಗಕ್ಕೆ ಹಳೆಯ ಕಟ್ಟಡ ಡೆಮಾಲಿಷ್ ಮತ್ತು ಮಣ್ಣು ತೆರವು ಮಾಡಿ ಶೌಚಾಲಯ ಬಾಗಿಲು ಓಪನ್ ಮಾಡಿಸಲು ಬೇಕಾದ ಕ್ರಮಗಳನ್ನು ಜರುಗಿಸಲು ಸೂಚಿಸಿದರು.ಹಾಗೂ ಮಳೆಹಾನಿ ಪ್ರಕರಣಕ್ಕೆ ಸೇರಿಸಿ ಪರಿಹಾರಕ್ಕೆ ಕಳುಹಿಸಿ ಕೊಡಲು ಅಧಿಕಾರಿಗಳಿಗೆ ಶಾಸಕಿ ಸೂಚಿಸಿದರು.
ಶಾಲೆಯು ಈ ರೀತಿಯ ಶೋಚನೀಯ ಸ್ಥಿತಿಗೆ ಬಂದರೂ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿಲ್ಲ. ಯಾವುದೇ ಅನುದಾನ ಒದಗಿಸಿಲ್ಲ. ಅಧಿಕಾರಿಗಳು ಇತ್ತ ಕಡೆ ಗಮನ ಕೂಡ ಹರಿಸಿಲ್ಲ ಎಂದು ತಾಲೂಕು ಪಂಚಾಯತ್ ಮುಖ್ಯಾಧಿಕಾರಿ ಮುಂದೆ ತಮ್ಮ ಅಳಲನ್ನು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ತೋಡಿಕೊಂಡರು. ಈ ಸಂದರ್ಭದಲ್ಲಿ ಸುಳ್ಯ ನಗರ ಗ್ರಾಮ ಆಡಳಿತಾಧಿಕಾರಿ ತಿಪ್ಪೇಶಪ್ಪ ಶಿಕ್ಷಣ ಇಲಾಖೆ ಶೀತಲ್ , ಸುಧಾಕರ್ , ರಿಯಾಝ್ ಕಟ್ಟೆಕಾರ್, ರವಿರಾಜ್ , ಜಯಶ್ರೀ , ಸಂಜೀವ ಹಾಗೂ ಶಾಲಾ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.