ಸುಳ್ಯದ ಗಾಂಧಿನಗರದ ಸರಕಾರಿ ಪಬ್ಲಿಕ್ ಶಾಲೆಯು ಹಲವಾರು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ನೀಡುತ್ತಿದ್ದು, ಇಲ್ಲಿ ಅತೀ ಹೆಚ್ಚು ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳು, ಅಲ್ಪಸಂಖ್ಯಾತ ಬಡ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಕಳೆದ ಅನೇಕ ವರ್ಷಗಳಿಂದ ಶಾಲೆಗೆ ಯಾವುದೇ ಅನುದಾನಗಳು ಬಿಡುಗಡೆ ಆಗದೆ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದೆ ನಾದುರಸ್ತಿಯಲ್ಲಿರುವುದು ಸುಳ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಇತ್ತೀಚೆಗೆ ಶಾಲೆಗೆ ಬಂದ 88 ಲಕ್ಷ ಅನುದಾನ ಉಪಯೋಗವಾಗದೇ ಪುನಃ ಇಲಾಖೆಗೆ ಹಿಂತಿರುಗಿ ಹೋಗಿದೆ ಎಂಬ ದೂರು ಕೇಳಿ ಬಂದಿದೆ.
ಈ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಗೆ ದೂರು ಸಲ್ಲಿಸಲಾಗಿದ್ದು, ಶಾಲೆಯನ್ನು ಉನ್ನತೀಕರಿಸಲು ಹಾಗೂ ಮೂಲಭೂತ ಸೌಲಭ್ಯಗಳಿಗೆ ಕೊರತೆ ಆಗದಂತೆ ಇರಲು ವಿಶೇಷ ಅನುದಾನ ಒದಗಿಸುವಂತೆ ಸಂಬಂಧ ಪಟ್ಟ ಸಚಿವರ ಹಾಗೂ ಇಲಾಖೆಗಳಿಗೆ ಸೂಚಿಸುವಂತೆ ಒತ್ತಾಯಿಸಿದ್ದಾರೆ.
ಶಾಲೆಗೆ ವ್ಯವಸ್ಥಿತ ಒಂದು ಕ್ರೀಡಾಂಗಣವಿಲ್ಲಾ ಹಾಗೂ ಶಾಲೆಗಳು ಸೋರುತ್ತಿದ್ದು ಶಿಕ್ಷಕರ ಕೊರತೆ ಇದೆ ಇಷ್ಟೆಲ್ಲಾ ಸಮಸ್ಯೆಗಳು ಆಗುತ್ತಿದ್ದರೂ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲಾ ಮುಂದಿನ ದಿನಗಳಲ್ಲಿ ನಾವು ಹೋರಾಟ ಸಮಿತಿಯನ್ನು ರಚಿಸಿ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ನಗರ ಪಂಚಾಯತ್ ಸದಸ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಿಯಾಝ್ ಕಟ್ಟೆಕ್ಕಾರ್ ತಿಳಿಸಿದ್ದಾರೆ.
ಈ ಬಗ್ಗೆ ವಿಚಾರಿಸಲು ಪ್ರಾಂಶುಪಾಲರನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಲಭ್ಯರಾಗಿಲ್ಲ.