Ad Widget

15 ದಿನಗಳಿಗೊಮ್ಮೆ ತಾಲೂಕು ಕಛೇರಿಗೆ ಭೇಟಿ – ಅಹವಾಲು ಸ್ವೀಕಾರ : ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್

ಜನರ ಸಮಸ್ಯೆ ಆಲಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ನಾನು ಪ್ರತೀ 15 ದಿನಗಳಿಗೊಮ್ಮೆ ಪ್ರತೀ ತಾಲೂಕು ಕಛೇರಿಗಳಿಗೆ ಭೇಟಿ ನೀಡುತ್ತೇನೆ. ಈ ವೇಳೆ ತಾಲೂಕಿನ ಸಾರ್ವಜನಿಕರು ನನ್ನನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬಹುದು ಹಾಗೂ ದಿನಾಂಕವನ್ನು ಪತ್ರಿಕೆಯ ಮೂಲಕ ಜನರಿಗೆ ತಿಳಿಸಲು ಅಧಿಕಾರಿಗಳ ಮೂಲಕ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

. . . . . . .

ಅವರು ಬುಧವಾರ ಸುಳ್ಯ ತಾಲೂಕು ಕಛೇರಿಗೆ ಭೇಟಿ ನೀಡಿ ಇಲಾಖಾಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಸಾರ್ವಜನಿಕರು ನನ್ನನ್ನು ಭೇಟಿಯಾಗಲು ಮಂಗಳೂರಿಗೆ ಬರುತ್ತಿರುತ್ತಾರೆ. ಆದರೆ ಇದು ಅವರಿಗೂ ತೊಂದರೆ, ಆದ್ದರಿಂದ ನಾನು ತಾಲೂಕು ಕಛೇರಿಗಳಿಗೆ 15 ದಿನಗಳಿಗೊಮ್ಮೆ ಭೇಟಿ ನೀಡುತ್ತೇನೆ. ಈ ವೇಳೆ ತಾಲೂಕಿನ ನಾಗರಿಕರು ತಾಲೂಕು ಕಛೇರಿಗೆ ಬಂದು ನನ್ನನ್ನು ಭೇಟಿಯಾಗಿ ಅಹವಾಲು ಸಲ್ಲಿಸಬಹುದು ಎಂದು ಹೇಳಿದರು.

ಇಲಾಖಾಧಿಕಾರಿಗಳ ಸಭೆ; ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಾಲೂಕು ಕಛೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆ ನಡೆಸಿದರು. ತಾಲೂಕಿನ ನೆರೆ ಬಾಧಿತ ಪ್ರದೇಶಗಳ ನೋಡೆಲ್ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ, ಅನಾಹುತ ಎದುರಿಸಲು ಬೇಕಾಗುವ ಸಿದ್ಧತೆಗಳನ್ನು ಮೊದಲೇ ಮಾಡಿಕೊಳ್ಳಿ, ಇತರೆ ಇಲಾಖೆಗಳ ನೆರವು ಪಡೆಯಿರಿ ಎಂದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ನಡೆಸಲಾದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಲೈನ್‌ಗಳಿಗೆ ಹಾನಿಯಾದಲ್ಲಿ ಕೂಡಲೇ ಮೆಸ್ಕಾಂ ನವರು ಮುಂಜಾಗ್ರತೆ ವಹಿಸಿ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದಲ್ಲಿ ತೆರವು ಕಾರ್ಯಕ್ಕೂ ಸಂಬಂಧಿಸಿದ ಇಲಾಖೆ ಸಿದ್ಧರಾಗಿರಬೇಕು ಎಂದು ಸೂಚಿಸಿದರು.

ಅಧಿಕಾರಿಗಳಿಗೆ ಸೂಚನೆ; ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ತಾಲೂಕು ವ್ಯಾಪ್ತಿಯಲ್ಲಿ ತಯಾರಿ ನಡೆಸಲಾಗಿದೆ. ನೋಡೆಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಉಂಟಾಗಬಹುದಾದ ಹಾಗೂ ಸಮಸ್ಯೆ ಆದಲ್ಲಿ ಎದುರಿಸಬೇಕಾಗುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಿ. ಸಮಸ್ಯೆ ಉಂಟಾದಲ್ಲಿ ಕೂಡಲೇ ಸ್ಪಂದಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸಿ, ಗ್ರಾ.ಪಂ ಪಿಡಿಒಗಳು ನೋಡೆಲ್ ಅಧಿಕಾರಿಗಳಿಗೆ ಪೂರಕ ಮಾಹಿತಿ ನೀಡುವಂತೆ ಸೂಚಿಸಿದರು.

ಆರೋಗ್ಯ ಇಲಾಖೆಯ ಪ್ರಭಾರ ಆರೋಗ್ಯ ಅಧಿಕಾರಿಗಳಾದ ಡಾ.ನಂದನ್ ಕುಮಾರ್ ರವರಲ್ಲಿ ಆರೋಗ್ಯ ಇಲಾಖಾ ವಿಷಯವನ್ನು ಪ್ರಶ್ನಿಸುತ್ತಾ ಆಂಬುಲೆನ್ಸ್ ಶನಿವಾರದ ಒಳಗೆ ಸುಳ್ಯದಲ್ಲಿ ಇರುವಂತೆ ವ್ಯವಸ್ಥೆ ಮಾಡಲು ಸೂಚಿಸಿದರು. ಈ ಸಂದರ್ಭದಲ್ಲಿ
ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಮಹೇಶ್‌ಚಂದ್ರ, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್., ಸುಳ್ಯ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎಸ್., ಜಿ.ಪಂ. ಇಂಜಿನಿಯರ್ ಭರತ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಮಂಜುನಾಥ್ ಸ್ವಾಗತಿಸಿದರು. ಉಪ ತಹಶೀಲ್ದಾರ್ ಚಂದ್ರಕಾಂತ್ ವಂದಿಸಿದರು.

ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಪ್ಲಾಟಿಂಗ್ ಸಮಸ್ಯೆ , ಹಾಗೂ ಪೈಬೆಚ್ಚಾಲು ರಸ್ತೆಗೆ ತೆಡೆಗೋಡೆ , ಸುಳ್ಯ ನಗರದ ಚರಂಡಿಯ ತೂತಿನ ಮೂಲಕ ಹಾವು ಬರುವುದರ ಬಗ್ಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿಸಿ ಸಂಬಂಧಿಸಿದ ಇಲಾಖೆಗಳಿಗೆ ಪರಿಹಾರಕ್ಕೆ ಸೂಚಿಸಿ ತಾಲೂಕು ಕ್ರೀಡಾಂಗಣ , ಸೇರಿದಂತೆ ಇತರ ಸ್ಥಳಗಳ ಪರಿಶೀಲನೆ ಮಾಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!