ಕರ್ನಾಟಕ ರಾಜ್ಯದಲ್ಲಿ ಜನರ ಉಪಯೋಗಕ್ಕಾಗಿ ನೋಂದಣಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಿದ್ದು ಸರ್ವರ್ ಸಮಸ್ಯೆಯಿಂದಾಗಿ ದಾಖಲೆಗಳು ನೋಂದಣಿಯಾಗದೆ ಜನರಿಗೆ ತೊಂದರೆಯಾಗಿರುತ್ತದೆ. ನೋಂದಣಿ ಕಚೇರಿಯಲ್ಲಿ ದಾಖಲೆಗಳು ನೋಂದಣಿಯಾಗದೆ ರೈತರಿಗೆ ಸಾಲ ಪಡೆದುಕೊಳ್ಳಲು ಸಮಸ್ಯೆಯಾಗಿರುತ್ತದೆ. ಕ್ರಯಪತ್ರ, ವಿಭಾಗಪತ್ರ, ಹಕ್ಕು ಖುಲಾಸೆ, ವೀಲು ನಾಮೆ, ವ್ಯವಸ್ಥಾಪತ್ರ, ದಾನ ಪತ್ರ ಹಾಗೂ ಇನ್ನಿತರ ದಾಖಲೆಗಳು ನೋಂದಣಿಯಾಗದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಸರಕಾರವು ಸಾರ್ವಜನಿಕರ ಉಪಯೋಗಕ್ಕಾಗಿ ತಂದಿರುವಂತಹ ಕಾವೇರಿ 2.0 ತಂತ್ರಾಂಶವು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಇದ್ದು ಜನರು ಶಾಪ ಹಾಕುವಂತಾಗಿರುತ್ತದೆ.
ಕಳೆದ ಜೂನ್ ತಿಂಗಳ 22 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ನೋಂದಣಿ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಏಕಕಾಲಕ್ಕೆ ಅಳವಡಿಸಲಾಗಿರುತ್ತದೆ. ಸುಳ್ಯದ ನೋಂದಣಿ ಕಚೇರಿಯಲ್ಲಿ ಇದುವೆರೆಗೆ ಕೆಲವೇ ಕೆಲವು ದಾಖಲೆಗಳು ಮಾತ್ರ ನೋಂದಣಿಗೊಂಡಿರುತ್ತದೆ. ಈ ಮೊದಲು ಸುಳ್ಯ ನೋಂದಣಿ ಕಚೇರಿಯಲ್ಲಿ ದಿನವೊಂದಕ್ಕೆ ಹೆಚ್ಚು ಕಡಿಮೆ 25 ರಿಂದ 30 ಕಡತ ದಾಖಲೆಗಳು ನೋಂದಣಿಗೊಳ್ಳುತ್ತಿದ್ದವು.
ನೋಂದಣಿ ಕಚೇರಿಯಲ್ಲಿ ದಾಖಲೆಗಳ ನೋಂದಣಿಗಳಲ್ಲಿ ಈಗಾಗಲೇ ಅಳವಡಿಸಿರುವ ಕಾವೇರಿ 2.0 ತಂತ್ರಾಂಶದ ಸರ್ವ‌್ರನ ಸಮಸ್ಯೆಯಿಂದ ಆಗಿರುವ ತೊಂದರೆಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಾನ್ಯ ಕಂದಾಯ ಸಚಿವರ ಗಮನ ಸೆಳೆದು ನಿವಾರಿಸುವರೆ ಪ್ರಯತ್ನಿಸಬೇಕೆಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರನ್ನು ವಕೀಲರಾದ ಧರ್ಮಪಾಲ ಕೊಯಿಂಗಾಜೆಯವರು ಆಗ್ರಹಿಸಿದ್ದಾರೆ.