ಜೀವನ ಅಂದ ಮೇಲೆ ಅಲ್ಲಿ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಬಂದು ಹೋಗುತ್ತಿರುತ್ತವೆ. ನಮ್ಮ ಜೀವನದಲ್ಲಿ ಕಷ್ಟ, ನೋವುಗಳು ಬಂದಾಗ “ಅಯ್ಯೋ ನಮ್ಮ ಜೀವನದಲ್ಲಿ ಕೆಟ್ಟ ದಿನಗಳು ಶುರುವಾಯ್ತು” ಅಂತ ಅಂದ್ಕೊಳ್ತೀವಿ, ಒಳ್ಳೆಯ ದಿನಗಳಿಗೋಸ್ಕರ ಕಾಯ್ತೀವಿ. ಅದೇ ರೀತಿ ನಮ್ಮ ಜೀವನ ಸಂತಸದಿಂದ ತುಂಬಿದ್ದರೆ “ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಶುರುವಾಗಿದೆ” ಅಂತ ಅಂದ್ಕೊಳ್ತೀವಿ. ಕಷ್ಟ, ನೋವುಗಳು ಬಂದಾಗ ನಮ್ಮ ಜೀವನದಲ್ಲಿ ಕೆಟ್ಟ ದಿನಗಳು ಶುರುವಾಯ್ತು ಅಂತ ಅಂದ್ಕೊಂಡು ಒಳ್ಳೆಯ ದಿನಗಳಿಗೋಸ್ಕರ ಕಾಯುತ್ತಾ ಕೂರುವ ಬದಲು “ಒಳ್ಳೆಯ ದಿನಗಳಿಗೋಸ್ಕರ ಕೆಟ್ಟ ದಿನಗಳ ಜೊತೆ ಯುದ್ಧ ಮಾಡಲೇಬೇಕು” ಎನ್ನುವ ಮಾತಿನಂತೆ ಕೆಟ್ಟ ದಿನಗಳ ಜೊತೆ ಯುದ್ಧ ಮಾಡಿಯಾದರೂ ಸರಿ ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಏಕೆಂದರೆ ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ತನ್ನಿಂತಾನೇ ಸೃಷ್ಟಿಯಾಗುವುದಿಲ್ಲ, ಬದಲಾಗಿ ನಮ್ಮ ಆತ್ಮವಿಶ್ವಾಸದಿಂದ, ಕಷ್ಟದಿಂದ ಹೊರಬರಲೇಬೇಕು ಎನ್ನುವ ನಮ್ಮ ಛಲದ ಹೋರಾಟದಿಂದ ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಸೃಷ್ಟಿಯಾಗುತ್ತವೆ…..
“ಕನಸು ಕಂಡವರಿಗಿಂತ ಕಷ್ಟ ಪಟ್ಟವರಿಗೆ ಯಶಸ್ಸು ಅಂದ್ರೆ ಏನೂ ಅಂತ ಚೆನ್ನಾಗಿ ಅರ್ಥ ಆಗುತ್ತದೆ” ಎನ್ನುವ ಮಾತಿನಂತೆ ಜೀವನದಲ್ಲಿ ಯಶಸ್ಸನ್ನ ಗಳಿಸೋದು ಕನಸು ಕಂಡಷ್ಟು ಸುಲಭವಲ್ಲ. ಏಕೆಂದರೆ ಜೀವನದಲ್ಲಿ ಯಶಸ್ಸನ್ನ ಗಳಿಸ್ಬೇಕಾದ್ರೆ ಒಂದು ಗುರಿ ಇರಲೇಬೇಕು. ಕನಸಿನಲ್ಲಿ ನಮಗೆ ಆ ಗುರಿ ಮಾತ್ರ ಕಾಣುತ್ತದೆ. ಆದರೆ ಆ ಗುರಿಯೆಡೆಗೆ ಸಾಗುವ ದಾರಿಯಲ್ಲಿರುವ ಕಷ್ಟಗಳು, ಕಲ್ಲು-ಮುಳ್ಳುಗಳು, ನೋವುಗಳು ನಾವು ಆ ದಾರಿಯಲ್ಲಿ ಹೆಜ್ಜೆಯಿಟ್ಟಾಗಲೇ ನಮಗೆ ಅರಿವಾಗುತ್ತದೆ…..
✍️ಉಲ್ಲಾಸ್ ಕಜ್ಜೋಡಿ
- Friday
- November 1st, 2024