ಸೇವಾಜೆ-ಮಡಪ್ಪಾಡಿ ರಸ್ತೆಯಲ್ಲಿ ಸೇವಾಜೆ ಪ್ರಾಥಮಿಕ ಶಾಲೆಯ ಬಳಿಯ ದೊಡ್ಡ ತಿರುವಿನಲ್ಲಿ ಸಿಗುವ ಈ ಸೇತುವೆಯು ಮೂರು ರಸ್ತೆಗಳು ಸೇರುವ ಕೇಂದ್ರದಲ್ಲಿದೆ. ಈ ಸೇತುವೆಯು ಸುಮಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ನದಿಯು ಮಳೆಯ ರಭಸದಿಂದಾಗಿ ಉಕ್ಕಿ ಹರಿಯುವುದರಿಂದ ಸೇತುವೆಯು ತಳಭಾಗದಿಂದಲೇ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿದ್ದು ಸೇತುವೆ ಮೇಲ್ಭಾಗದಲ್ಲಿ ತಡೆ ಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ.
ರಸ್ತೆಯೂ ಕೂಡ ಅಗಲ ಕಿರಿದಾಗಿದ್ದು ಎರಡು ಘನ ವಾಹನಗಳು ಸೈಡ್ ಕೊಡುವ ಸಂದರ್ಭ ಇಕ್ಕಟ್ಟಿನಲ್ಲಿ ಸಿಲುಕಿ ಸಮಯ ವ್ಯರ್ಥವಾಗುತ್ತಿದೆ. ನೇರವಾಗಿ ಬಸ್ಸು, ಲಾರಿಗಳಂತಹ ವಾಹನಗಳ ತಿರುಗುವಿಕೆಗೆ ಕಷ್ಟಕರವಾಗಿದೆ. ಸರಕಾರ ಇತ್ತೀಚಿನ ದಿನಗಳಲ್ಲಿ ಹೊಸದಾದ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿದೆ.ಆದರೇ ಈ ಸಂದರ್ಭ ಸೇತುವೆ ಮೇಲೆಯೇ ರಸ್ತೆ ನಿರ್ಮಿಸಿದ್ದು ಮುರಿದು ಹೋದ ಸೇತುವೆಗೆ ತೇಪೆ ಹಚ್ಚಲಾಗಿದೆ
. ದುರಸ್ಥಿಗೊಳಿಸುವ ಸಂದರ್ಭ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿರು ಯೋಚನೆಯನ್ನೂ ಮಾಡಿಲ್ಲ. ಈ ಸೇತುವೆಯನ್ನು ಅಭಿವೃದ್ಧಿಗೊಳಿಸಬೇಕಾದರೇ ನೂತನವಾಗಿ ಕಾಮಗಾರಿಗೊಂಡ ರಸ್ತೆಯನ್ನು ಕೆಡವಬೇಕಾಗುತ್ತದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಸೇತುವೆಯನ್ನು ದುರಸ್ಥಿಗೊಳಿಸಿದ್ದರೆ ಎರಡೂ ಕಾರ್ಯಗಳು ಏಕಕಾಲದಲ್ಲಿ ನಡೆಯುತ್ತಿತ್ತು.
ಸರಕಾರಿ ಬಸ್ಸು, ಶಾಲಾ ವಾಹನ, ಖಾಸಗಿ ವಾಹನ, ನಾಗರಿಕರು, ಶಾಲಾ ವಿದ್ಯಾರ್ಥಿಗಳು ದಿನನಿತ್ಯ ಈ ಮಾರ್ಗವಾಗಿ ಸೇತುವೆಯನ್ನು ಹಾದು ಹೋಗುವುದರಿಂದ ಪ್ರಾಣ ಭಯದ ಸಂಕಟದಲ್ಲಿದ್ದಾರೆ. ಈ ಕುರಿತು ಜನರು ಆದಷ್ಟು ಶೀಘ್ರ ಈ ಸೇತುವೆಯನ್ನು ದುರಸ್ಥಿಗೊಳಿಸುವಂತೆ ಜನ ಒತ್ತಾಯಿಸಿದ್ದಾರೆ.