ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ, ಮಡಿಕೇರಿ ಇದರ ಆಶ್ರಯದಲ್ಲಿ ನಡೆದ 8 ದಿನಗಳ Pre RDC II ಮತ್ತು CATC ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್ 21ರಂದು ಸಂಜೆ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ನಿರ್ದೇಶಕ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಮಾತನಾಡಿ, ಕ್ಯಾಂಪ್ ನಲ್ಲಿ ಸಿಕ್ಕಂತಹ ಶಿಸ್ತು, ಸಂಯಮ, ಆತ್ಮ ಗೌರವ, ಆತ್ಮ ವಿಶ್ವಾಸ, ವ್ಯಕ್ತಿತ್ವ ವಿಕಸನ, ಸಹಜೀವನ, ಕೆಲಸದ ಮಹತ್ವ, ಹೊಂದಾಣಿಕೆ, ಗುರು ಹಿರಿಯರಿಗೆ ಕೊಡುವ ಗೌರವ ಇವುಗಳನ್ನೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಸಮಾರೋಪ ಭಾಷಣ ಮಾಡಿದ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ, ಮಡಿಕೇರಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆಫ್ರಿನ್ ಗಿಲ್ ಬರ್ಟ್ ಅರನ್ಹಾ ಮಾತನಾಡಿ, ಶಿಬಿರದ ದ್ಯೇಯೋದ್ದೇಶ ಈಡೇರಿದುದನ್ನು ಸ್ಮರಿಸುತ್ತಾ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲೆಫ್ಟಿನೆಂಟ್ ಕರ್ನಲ್ ಚಾಕೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆ. ಸೀತಾರಾಮ ಎಂ ಡಿ, ವಿವಿಧ ಬೆಟಾಲಿಯನ್ ಗಳ ಅಧಿಕಾರಿಗಳು, ವಿವಿಧ ಕಾಲೇಜಿನ ಅಸೋಸಿಯೇಟ್ ಎನ್ ಸಿ ಸಿ ಆಫೀಸರ್ ಗಳು ಹಾಗೂ ಮಂಗಳೂರು, ಮಡಿಕೇರಿ, ಉಡುಪಿ, ಶಿವಮೊಗ್ಗ ಜಿಲ್ಲೆಗಳ 425 ಎನ್ ಸಿ ಸಿ ಕೆಡೆಟ್ ಗಳು, ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಂಟು ದಿನಗಳ ಕಾಲ ನಡೆದ ಶಿಬಿರದ ಚಟುವಟಿಕೆಗಳನ್ನು ದಾಖಲಿಸಿದ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಶಿಬಿರದಲ್ಲಿ ಕೆಡೆಟ್ ಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 2022 ಜನವರಿ ಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಕಾಲೇಜಿನ ಎನ್ ಸಿ ಸಿ ಕೆಡೆಟ್ ಅಭಿಷೇಕ್ ಎ ಅವರನ್ನು ಅಭಿನಂದಿಸಲಾಯಿತು.