Ad Widget

ಮೀನುಗಾರರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ – ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮ

ಮೀನುಗಾರಿಕೆಯನ್ನು ಉತ್ತೇಜಿಸುವುದು ಹಾಗೂ ಮೀನುಗಾರರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ. ಮತ್ಸ್ಯವಾಹಿನಿ ಯೋಜನೆಯಡಿ ಗ್ರಾಮಾಂತರ ಭಾಗಕ್ಕೆ ಮೀನು ಸಾಗಾಟಕ್ಕೆ ಅನುಕೂಲವಾಗುವಂತೆ ರಾಜ್ಯಕ್ಕೆ ೩೦೦ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಬಿಡುಗಡೆಯಾಗಿದ್ದು, ಶೀಘ್ರ ಅವುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ತೀರ್ಥರಾಮ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದ್ರ ಮೀನುಗಾರಿಕೆಯಲ್ಲಿ ಮೀನು ಉತ್ಪತ್ತಿ ಕಡಿಮೆಯಾಗುತ್ತಿರುವುದರಿಂದ ಒಳನಾಡು ಮೀನುಗಾರಿಕೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ೨೫೦ ಮೀನು ಮರಿಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ಮೀನು ಕೃಷಿ ಮಾಡಲು ೨ ಲಕ್ಷ ರು.ವರೆಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಜತೆಗೆ ಐಸ್‌ಪ್ಲ್ಯಾಂಟ್, ಐಸೊಲೇಟೆಡ್ ವಾಹನ ನಿರ್ಮಿಸಲು ಸಬ್ಸಿಡಿ ಸಹಿತ ಸಾಲ ನೀಡಲಾಗುವುದು ಎಂದರು.ಮೀನುಗಾರರಿಗೆ ಸಹಕಾರ ಸಂಘಗಳಿಂದ ಸಾಲ ಕೊಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಶೀಘ್ರದಲ್ಲೇ ಇದು ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ ಎಂದು ತೀರ್ಥರಾಮ ತಿಳಿಸಿದರು.

. . . . . . .

ಬಂದರುಗಳ ಅಭಿವೃದ್ಧಿ : ಕಾರವಾರದ ಮೀನುಗಾರಿಕಾ ಬಂದರಿನ ೨೫೦ ಕೋಟಿ ರು. ಕಾಮಗಾರಿ ಪ್ರಗತಿಯಲ್ಲಿದೆ. ಅಂಕೋಲಾದಲ್ಲಿ ೬ ಸಾವಿರ ಕೋಟಿ ರು. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಿಸಲು ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದರು.ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ೫೦ ಸಾವಿರ ರು.ವರೆಗೆ ಸಾಲ ಯೋಜನೆ ರೂಪಿಸಲಾಗಿದೆ. ಮೀನುಗಾರರ ಮಕ್ಕಳಿಗೆ ೫೦ ಕೋಟಿ ರು. ವಿದ್ಯಾನಿಧಿ, ೫ ಸಾವಿರ ಮೀನುಗಾರರಿಗೆ ಮನೆ ನಿರ್ಮಿಸಿಕೊಡುವ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಅಲ್ಲದೆ ಮೀನುಗಾರ ಸ್ತ್ರೀಶಕ್ತಿ ಸಂಘಗಳಿಗೆ ೩ ಲಕ್ಷ ರು.ವರೆಗೆ ಸಹಾಯಧನ ಘೋಷಣೆ ಮಾಡಲಾಗಿದೆ. ಅಲ್ಲದೆ, ಕಿಸಾನ್ ಕ್ರೆೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಮೀನುಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಮೀನುಗಾರಿಕೆ ವೇಳೆ ಮೃತಪಟ್ಟರೆ ರಾಜ್ಯ ಮತ್ತು ಕೇಂದ್ರದ ನೆರವು ಸೇರಿ ಒಟ್ಟು ೧೧ ಲಕ್ಷ ರು. ಪರಿಹಾರಧನ ಸಿಗಲಿದೆ ಎಂದು ತೀರ್ಥರಾಮ ಹೇಳಿದರು. ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಗಣೇಶ್ ಹೊಸಬೆಟ್ಟು, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ದಂಡ ಪ್ರಮಾಣ ಹೆಚ್ಚಳ

ಇದುವರೆಗೆ ಕರ್ನಾಟಕದ ಮೀನುಗಾರರು ಮೀನುಗಾರಿಕೆ ಮಾಡುತ್ತ ರಾಜ್ಯದ ಗಡಿ ದಾಟಿ ಬೇರೆ ರಾಜ್ಯಗಳ ಗಡಿಯೊಳಗೆ ಹೋದರೆ ಅಲ್ಲಿ ಹೆಚ್ಚು ದಂಡ ಹಾಕುತ್ತಿದ್ದರು. ಬೇರೆ ರಾಜ್ಯದ ಮೀನುಗಾರರು ಗಡಿ ಉಲ್ಲಂಘಿಸಿದರೆ ಕರ್ನಾಟಕದಲ್ಲಿ ಇದುವರೆಗೆ ಕಡಿಮೆ ದಂಡವಿತ್ತು. ಇದೀಗ ೫ ಲಕ್ಷ ರು.ವರೆಗೂ ದಂಡ ಹಾಕಬಹುದಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಾಗಿದೆ ಎಂದು ತೀರ್ಥರಾಮ ತಿಳಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!