ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ತಲಾ ಒಬ್ಬ ಕಾರ್ಮಿಕನಿಂದ ತಿಂಗಳಿಗೆ 14೦೦ರಂತೆ ನೀಡಿದ್ದು, ಇದೀಗ ಸರಕಾರವು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸುತ್ತದೆ ಎನ್ನುತ್ತಿದೆ. ಇದು ಅಪ್ಪಟ ಸುಳ್ಳು. ಇದನ್ನು ಕಟ್ಟಡ ಕಾರ್ಮಿಕ ಸಂಘಟನೆ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಗೌರವಾಧ್ಯಕ್ಷ ಕೆ.ಪಿ. ಜಾನಿ ತಿಳಿಸಿದರು.
ಅವರು ಸುಳ್ಯದಲ್ಲಿ ಅ.14 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಟ್ಟಡ ಕಾರ್ಮಿಕರಿಗೆ ಸರಕಾರ ಉಚಿತವಾಗಿ ಬಸ್ ಪಾಸ್ ಕೊಡುತ್ತಿದೆ ಎಂದಾದರೆ ಕಟ್ಟಡ ಕಾರ್ಮಿಕರು ಸ್ವಂತ ದುಡಿಮೆಯ ಹಣದಿಂದ ನೀಡಿದ ವಂತಿಗೆಯೂ ಸೇರಿರುವ ಕಲ್ಯಾಣ ಮಂಡಳಿ ಖಾತೆಯಿಂದ ಸರಕಾರ ಹಣ ಪಡೆಯುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಸರಕಾರ ಕಾರ್ಮಿಕರ ಸಂಘಟನೆಗಳನ್ನು ದುರ್ಬಲಗೊಳಿಸಿ ನಾಶಪಡಿಸಲು ಯತ್ನಿಸುತ್ತಿದೆ ಎಂದು ದೂರಿದ ಅವರು ಬಸ್ ಪಾಸ್ ಸೇರಿದಂತೆ ಕಲ್ಯಾಣ ಮಂಡಳಿಯಿಂದ ದೊರಕುವ ಇತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಅಧಿಕಾರವನ್ನು ಸಂಘಟನೆಗಳಿಗೆ ನೀಡದೆ ಖಾಸಗಿ ಸೈಬರ್‌ಗಳಿಗೆ ಮಾತ್ರ ನೀಡಿದೆ. ಇದು ಕಾರ್ಮಿಕ ಸಂಘಟನೆಯನ್ನು ವ್ಯವಸ್ಥಿತವಾಗಿ ತುಳಿಯಲು ಮಾಡುತ್ತಿರುವ ಯತ್ನ. ಒಂದು ವೇಳೆ ಎಲ್ಲಾ ಕಾರ್ಮಿಕರು ಸೈಬರ್ ಸೆಂಟರ್‌ಗಳ ಮೂಲಕವೇ ಅರ್ಜಿಗಳನ್ನು ಹಾಕುವಂತಾಗಿ ಕಾರ್ಮಿಕ ಸಂಘಟನೆಗಳ ಕಚೇರಿಯನ್ನು ಸಂಪರ್ಕಿಸದಿರುವ ವ್ಯವಸ್ಥೆ ಆದರೆ ಮುಂದೆ ಸರಕಾರ ಕಾರ್ಮಿಕರಿಗೆ ತೊಂದರೆ ಮಾಡಿದಾಗ ಅದನ್ನು ಕೇಳಲು ಮತ್ತು ಪ್ರತಿಭಟನೆ ಮಾಡಲು ಸೈಬರ್ ಸೆಂಟರ್‌ಗಳ ಮಾಲಕರು ಬರುತ್ತಾರಾ ಎಂದು ಅವರು ಪ್ರಶ್ನಿಸಿದರು. ಸಿಐಟಿಯು ಎಡಪಂಥೀಯ ಹಿನ್ನಲೆಯ ಕಾರ್ಮಿಕ ಸಂಘಟನೆ ಎಂಬುದು ಸರಕಾರದ ನಿಲುವಾದರೆ ಸರಕಾರ ನಡೆಸುವ ಪಕ್ಷಗಳು ಕಾರ್ಮಿಕ ಸಂಘಟನೆ ಕಟ್ಟಿಕೊಂಡು ಅವರ ಪರವಾಗಿ ದುಡಿಯಲಿ ಎಂದು ಸವಾಲೆಸೆದರು. 2019ರಿಂದ ಮದುವೆ, ವಿದ್ಯಾರ್ಥಿ ವೇತನ, ಆರೋಗ್ಯ ಚಿಕಿತ್ಸೆಗಳಿಗೆ ಸಂಬಂಧಿಸಿದ 6೦ ಸಾವಿರದಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಾಗಿದೆ ಎಂದರು.
ನಮ್ಮ ಸಿಐಟಿಯು ಸಂಘಟನೆಯ ಶೇ. 99 ಕಾರ್ಮಿಕರಿಗೆ ಈ ಸೌಲಭ್ಯ ದೊರೆತಿಲ್ಲ. ಹಾಗಾದರೆ ಯಾರಿಗೆ ಹೋಗಿದೆ? ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಹೋರಾಟವನ್ನು ಕಟ್ಟಡ ಕಾರ್ಮಿಕರ ಪೆಢರೇಶನ್ ಮಾಡಲಿದೆ ಎಂದರು.
ಕಟ್ಟಡ ಕಾರ್ಮಿಕರ ಪೆಢರೇಶನ್ ಸುಳ್ಯ ತಾಲೂಕು ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಜಯನಗರ, ಖಜಾಂಜಿ ಗಣೇಶ್ ವಿ. ಕೊಡಿಯಾಲಬೈಲು, ಜೊತೆ ಕಾರ್ಯದರ್ಶಿ ವಿಜಯ್ ಮಾಲತೇಶ್, ಉಪಾಧ್ಯಕ್ಷ ಶಿವರಾಮ ಗೌಡ, ಕೃಷಿ ದಿನಗೂಲಿ ಮತ್ತು ಉದ್ಯೋಗ ಖಾತರಿ ಕಾರ್ಮಿಕ ಸಂಘದ ಸಂಪಾಜೆ ವಲಯಾಧ್ಯಕ್ಷ ವಸಂತ ಪೆಲತ್ತಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.