Ad Widget

ವಿದ್ಯುತ್ ಸಮಸ್ಯೆಗೆ ಬಂದಾಗ ಧಾವಿಸಿ ಬರುವ ಹೆಮ್ಮೆಯ ಪವರ್ ಮ್ಯಾನ್ ಗಳಿಗೆ ಬಿಗ್ ಸೆಲ್ಯೂಟ್

. . . . . .

ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದು ತೀರ ಸಾಮಾನ್ಯದ ಸಂಗತಿ. ಜೋರಾದ ಗಾಳಿ, ಮಳೆಯ ಸಂದರ್ಭಗಳಲ್ಲಿ ಮರಗಳು ಉರುಳಿ ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಲೇ ಇರುತ್ತವೆ. ಹೀಗೆ ವಿದ್ಯುತ್ ಸಮಸ್ಯೆ ಉಂಟಾಗಿ ಮನೆಯಲ್ಲಿ ಕರೆಂಟ್ ಇಲ್ಲ ಎಂದಾಗ ನಮಗೆಲ್ಲರಿಗೂ ತಕ್ಷಣ ನೆನಪಾಗುವುದು “ಪವರ್ ಮ್ಯಾನ್” ಗಳು.
ಹೌದು ಎಲ್ಲೇ ಏನೇ ವಿದ್ಯುತ್ ಸಮಸ್ಯೆ ಉಂಟಾದರೂ ಅದನ್ನು ಸರಿಪಡಿಸಲು ತಕ್ಷಣ ಧಾವಿಸಿ ಬರುವವರು ನಮ್ಮ ಹೆಮ್ಮೆಯ ಪವರ್ ಮ್ಯಾನ್ ಗಳು. ವಿದ್ಯುತ್ ಸಮಸ್ಯೆ ಸರಿಪಡಿಸುವಲ್ಲಿ ಎಂತಹುದೇ ಸವಾಲುಗಳಿದ್ದರೂ, ಆ ಎಲ್ಲಾ ಸವಾಲುಗಳನ್ನು ಮೀರಿ ಸಮಸ್ಯೆಯನ್ನು ಸರಿಪಡಿಸಿ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಲ್ಲಿ ಪವರ್ ಮ್ಯಾನ್ ಗಳು ಸಫಲರಾಗುತ್ತಾರೆ.
ನಾನು ಇಲ್ಲಿ ಪವರ್ ಮ್ಯಾನ್ ಗಳ ಕೆಲಸದ ಬಗ್ಗೆ ಬರೆಯಲು ಕಾರಣ ಅವರ ಸಾಹಸಮಯ ಕಾರ್ಯವೈಖರಿ. ಕಳೆದ ಆಗಸ್ಟ್ ತಿಂಗಳಲ್ಲಿ ಹರಿಹರ ಪಲ್ಲತ್ತಡ್ಕ, ಕಲ್ಮಕಾರು, ಕೊಲ್ಲಮೊಗ್ರು ಮುಂತಾದ ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಇಲ್ಲಿನ ಮೆಸ್ಕಾಂ ನ ನಿತ್ಯಾನಂದ ಹರಿಹರ ಹಾಗೂ ತಂಡ, ಖಾಸಗಿ ಕೆಲಸಗಾರರು ಹಾಗೂ ಸ್ಥಳಿಯರು ಸೇರಿ ಎರಡು ಮೂರು ದಿನಗಳಲ್ಲಿ ವಿದ್ಯುತ್ ಕಂಬಗಳನ್ನು ಸರಿಪಡಿಸಿ ಊರಿಗೆ ಮತ್ತೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವಲ್ಲಿ ಸಫಲರಾಗಿದ್ದರು.
ಅದೇ ರೀತಿ ಕಳೆದ ತಿಂಗಳು ಸೆಪ್ಟೆಂಬರ್ 24 ರಂದು ಐನೆಕಿದುವಿನ ಗುಂಡಡ್ಕ ಎಂಬಲ್ಲಿ ಹೊಳೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ತಕ್ಷಣವೇ ಅಲ್ಲಿಗೆ ಧಾವಿಸಿದ ಹರಿಹರ ಪಲ್ಲತ್ತಡ್ಕದ ಪವರ್ ಮ್ಯಾನ್ ಗಳಾದ ವಿಜಯ ಕುಮಾರ್, ಪ್ರಶಾಂತ್, ಮಾರುತಿ ಇವರುಗಳು ಹೊಳೆಯಲ್ಲಿ ಈಜಿ ವಿದ್ಯುತ್ ತಂತಿಯನ್ನು ಎತ್ತಿ ಎಳೆದು ಕಟ್ಟಿ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇವರ ಈ ಕಾರ್ಯವೈಖರಿಗೆ ಊರಿನವರು ಶ್ಲಾಘನೆ ವ್ಯಕ್ತಪಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಸುಲಭದ ಮಾತಲ್ಲ. ಏಕೆಂದರೆ ಗಾಳಿ ಮಳೆ ಬಂದರೆ ಮರಗಳು ಉರುಳಿ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸರ್ವೇ ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಎಲ್ಲೇ ವಿದ್ಯುತ್ ಸಮಸ್ಯೆ ಉಂಟಾದರೂ ಧಾವಿಸಿ ಬರುವ ರಿಯಲ್ ಹೀರೋಗಳಾದ ಪವರ್ ಮ್ಯಾನ್ ಗಳಿಗೆ ಹ್ಯಾಟ್ಸಾಪ್.

ಬರಹ : ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!