ಸುಳ್ಯ: ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದ ಕುರಿತು ಆ.27ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರವರಿಂದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು.
ಗೋಷ್ಠಿಯಲ್ಲಿ ಮಾತನಾಡಿದ ಅವರು ಆ.30 ರಂದು 75ರ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ಜಾಲ್ಸೂರಿನಿಂದ ಸುಳ್ಯದವರೆಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 75 ಕಿ.ಮೀ ನಡಿಗೆ ಆಯೋಜಿಸಿದ್ದೇವೆ. ಆ ದಿನ ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಸೇರಿ 2 ಸಾವಿರ ಮಂದಿ ಈ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ದೇಶಾಭಿಮಾನ ಇರುವ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ನಡಿಗೆ ಪಕ್ಷದ ನೇತೃತ್ವದಲ್ಲಿ ಇರದೆ ರಾಷ್ಟ್ರಧ್ವಜ ಹಾಗೂ ಗಾಂಧೀ ಟೋಪಿ ತೊಟ್ಟು ನಡಿಗೆ ನಡೆಯಲಿದೆ ಎಂದು ಹೇಳಿದರು.
ಜಾಲ್ಲೂರಿನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನಡಿಗೆಗೆ ಚಾಲನೆ ನೀಡುವರು. ಮುಖಂಡರಾದ ರಮಾನಾಥ ರೈ, ಯು ಟಿ ಖಾದರ್, ಅನೇಕ ನಾಯಕರು ಭಾಗವಹಿಸಲಿದ್ದಾರೆ. ನಡಿಗೆ ಸುಳ್ಯಕ್ಕೆ ತಲುಪಿದ ಬಳಿಕ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆ ನಡೆಯಲಿದ್ದು ಕೊಪ್ಪ ಬ್ಲಾಕ್ ಅಧ್ಯಕ್ಷ ಸುಧೀ ಕುಮಾರ್ ಮರೋಳಿ ಸಮಾರೋಪ ಭಾಷಣ ಮಾಡುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ, ಕೆಪಿಸಿಸಿ ಸಂಯೋಜಕ ಹಾಗು ಸುಳ್ಯ ಬ್ಲಾಕ್ ಉಸ್ತುವಾರಿ ಜಿ. ಕೃಷ್ಣಪ್ಪ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಂದರಾಜ ಸಂಕೇಶ, ಸುರೇಶ್ ಅಮೈ, ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ, ತಿರುಮಲೇಶ್ವರ ಬೊಳ್ಳೂರು, ಆಶಿಶ್ ಕೃಷ್ಣಪ್ಪ, ಜಯಂತಿ ಆಲೆಟ್ಟಿ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.