ಕಳಂಜದಲ್ಲಿ ಗುಂಪು ಹಲ್ಲೆ ನಡೆಸಿ ಯುವಕನನ್ನು ಕೊಲೆ ಮಾಡಿರುವುದರ ಬಗ್ಗೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೊಲೆ ತನಿಖೆಗಾಗಿ ಸರಕಾರ ಪ್ರತ್ಯೇಕ ತನಿಖಾ ತಂಡ ರಚಿಸಬೇಕು ಹಾಗೂ ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಂಡು ಮೃತನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ ಪರಿಹಾರ ಘೋಷಿಸಬೇಕು ಎಂದು ಮನವಿ ಮಾಡಿದರು. ನಾವು ಇಂತಹ ಕೃತ್ಯ ನಡೆದರೂ ಶಾಂತಿಯಿಂದ ಇದ್ದೇವೆ. ಹಾಗಾಗಿ ಜಿಲ್ಲೆಯಲ್ಲಿ ಸಂಯಮ, ಶಾಂತಿ, ಸೌಹಾರ್ಧತೆ ಕಾಪಾಡಿಕೊಳ್ಳಲು ಸರಕಾರ ರಾಜಧರ್ಮ ಪಾಲಿಸಬೇಕು ಎಂದು ಹೇಳಿದರು.
ಕಳಂಜ ಘಟನೆ ಸುಳ್ಯಕ್ಕೆ ಕಪ್ಪು ಚುಕ್ಕೆ- ಶಾಫಿ ಬೆಳ್ಳಾರೆ
ಕಳಂಜದ ಈ ಹತ್ಯೆ ಮಾಡಿರುವುದು ಸುಳ್ಯ ತಾಲೂಕಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಈ ರೀತಿಯ ಘಟನೆ ನಡೆಯದಂತೆ ಎಚ್ಚರ
ವಹಿಸಬೇಕಾಗುತ್ತದೆ. ಹಾಗೂ ಆತನ ಹತ್ಯೆಗೆ ಕಾರಣವಾಗಿದ್ದ 8 ಮಂದಿಯನ್ನು ತಕ್ಷಣ ಬಂಧಿಸಿದ್ದಾರೆ. ಹಾಗೆಯೇ ಯಾವುದೇ ರಾಜಕೀಯ ಒತ್ತಡಕ್ಕೆ ಬೀಳದೆ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಮುಖಂಡರಾದ ಅಬ್ದುಲ್ ಕಲಾಂ, ರಫೀಕ್ ಎಂ.ಎಂ, ಮೃತ ಮಸೂದ್ ಮಾವ ಹೈದರ್ ಉಪಸ್ಥಿತರಿದ್ದರು.