ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇದರ ವಾರ್ಷಿಕ ಮಹಾಸಭೆಯು ದಿನಾಂಕ 20/7/2022 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ನಡೆಯಿತು.
ಸುಳ್ಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮಹದೇವ.ಎಸ್.ಪಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತಾಲೂಕಿನ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ತಮ್ಮ ಶಾಲೆಯಲ್ಲಿ ದಳವನ್ನು ತೆರೆದು ಇದನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಂ.ಜೆ. “ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ” ಮೂಲಕ ಮಕ್ಕಳಲ್ಲಿ ಶಿಸ್ತು ಮತ್ತು ಹೊಂದಾಣಿಕೆಯಂತಹ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರು ಕ್ರಿಯಾಶೀಲರಾಗಿ ತೊಡಗಿಕೊಳ್ಳಬೇಕಾಗಿ ತಿಳಿಸಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಶ್ರೀ ರಾಮಶೇಷ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶ್ರೀ ಎಂ.ಜಿ ಕಜೆ ಮತ್ತು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಇವರು ಭಾಗವಹಿಸಿ ಶುಭಹಾರೈಸಿದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ಲಿಂಗಪ್ಪ ಬೆಳ್ಳಾರೆ ವರದಿ ವಾಚಿಸಿದರು. ಖಜಾಂಜಿ ಶ್ರೀಮತಿ ರೇವತಿ ಪಿ ಇವರು ಆಯವ್ಯಯ ಮಂಡಿಸಿದರು. ಈ ಸಂದರ್ಭದಲ್ಲಿ ಸುಮಾರು 33 ವರ್ಷ ಅಧ್ಯಕ್ಷರಾಗಿ ಸ್ಥಳೀಯ ಸಂಸ್ಥೆಯನ್ನು ಮುನ್ನಡೆಸಿದ ಶ್ರೀ ಬಾಪೂ ಸಾಹೇಬ್ ಇವರನ್ನು ಸನ್ಮಾನಿಸಲಾಯಿತು.
ಕೊರೋನಾದಂತಹ ಸಂದರ್ಭದಲ್ಲಿ ತರಗತಿ ನಡೆಸಿದ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ರಾಜ್ಯ ಸಂಸ್ಥೆ ನೀಡಿದ ಗೌರವಧನದ ಚೆಕ್ ಅನ್ನು ಶ್ರೀ ರಾಮಶೇಷ ಶೆಟ್ಟಿ ಇವರು ವಿತರಿಸಿದರು. ದ್ವಿತೀಯ ಸೋಪಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಮಾಧವ ಗೌಡ ಮಡಪ್ಪಾಡಿ, ಶ್ರೀಮತಿ ವನಿತಾ ಕುಮಾರಿ,ಶಿಕ್ಷಣ ಸಂಯೋಜಕರಾದ ಶ್ರೀ ವಸಂತ ಏನೆಕಲ್, ಶ್ರೀಮತಿ ಸಂಧ್ಯಾ ಕುಮಾರಿ,ADC ಪ್ರೇಮಲತಾ ಉಪಸ್ಥಿತರಿದ್ದರು.
ಶ್ರೀಮತಿ ಸಂಧ್ಯಾ ಕುಮಾರಿ ಸ್ವಾಗತಿಸಿ, ಶ್ರೀಮತಿ ವನಿತಾ ಕುಮಾರಿ ವಂದಿಸಿದರು. ಜೊತೆ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಬನ ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನ ಊಟದ ಬಳಿಕ ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್ ಮತ್ತು ಬನ್ನೀ ಆಂಟಿಗಳಿಗೆ ಪುನಃ ಶ್ಚೇತನ ಕಾರ್ಯಗಾರವನ್ನು ನಡೆಸಲಾಯಿತು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಮತ್ತು ಶ್ರೀಮತಿ ಪ್ರೇಮಲತಾ ಎ.ಎಚ್ ಇವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
- Thursday
- November 21st, 2024