Ad Widget

ಬೆಳ್ಳಾರೆ : ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು – 8 ಮಂದಿ ಬಂಧನ

ಕ್ಷುಲ್ಲಕ ಕಾರಣಗಳಿಂದ ತಾಲೂಕಿನ ಕಳಂಜ ಗ್ರಾಮದಲ್ಲಿ ಹಲ್ಲೆಗೊಳಗಾಗಿದ್ದ ಮುಹಮ್ಮದ್ ಮಸೂದ್ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಬಂಧಿತರಾಗಿದ್ದಾರೆ.‌ ಬಂಧಿತ ಆರೋಪಿಗಳ ಮೇಲೆ ಪೊಲೀಸರು ಕೊಲೆ ಕೇಸು ದಾಖಲಿಸಿದ್ದಾರೆ.

. . . . . . .

ಘಟನೆಯ ವಿವರ

ಕಳಂಜದ ತನ್ನ ಅಜ್ಜಿಮನೆಯಲ್ಲಿದ್ದ ಪೆರುವಾಜೆಯ ಇಬ್ರಾಹಿಂ ಶಾನಿಫ್ ಎಂಬವರು ದೂರು ನೀಡಿದ್ದು ದೂರಿನಲ್ಲಿ ವಿವರ ನೀಡಿದ್ದಾರೆ.
ಕಾಸರಗೋಡು ತಾಲೂಕಿನ ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ ಎಂಬ ಯುವಕ ಕಳಂಜ ಗ್ರಾಮದಲ್ಲಿರುವ ತನ್ನ ಅಜ್ಜ ಅಬ್ಬು ಮುಕ್ರಿ ಎಂಬವರ ಮನೆಗೆ ತಿಂಗಳ ಹಿಂದೆ ಬಂದಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ.
ಜುಲೈ 19 ರಂದು ಸಂಜೆ ಕಳಂಜ ಬಸ್ಸು ನಿಲ್ದಾಣದ ಬಳಿಯ ಅಂಗಡಿಯಲ್ಲಿ ಮಸೂದ್ ದೇಹ, ಸ್ಥಳೀಯ ಸುಧೀರ್ ಎಂಬ ಯುವಕನ ದೇಹಕ್ಕೆ ತಾಗಿತೆಂಬ ಕಾರಣಕ್ಕಾಗಿ ಅವರ ಮಧ್ಯೆ ಮಾತಿನ ಚಕಮಕಿ ನಡೆದಾಗ ಮಸೂದ್ ಸುಧೀರ್ ಗೆ ಹೊಡೆದು, ಜನ ಸೇರತೊಡಗಿದಾಗ ಓಡಿಹೋದನೆನ್ನಲಾಗಿದೆ.
ರಾತ್ರಿ ನಾನು ಅಜ್ಜಿಮನೆಯಲ್ಲಿರುವಾಗ ವಿಷ್ಣುನಗರ ಬಸ್ ನಿಲ್ದಾಣದ ಬಳಿ ಜನ ಗುಂಪು ಸೇರಿರುವುದನ್ನು ಕಂಡು ಅತ್ತ ಹೋದಾಗ ಅಲ್ಲಿದ್ದ ಅಭಿಲಾಷ್, ಸುನಿಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಎಂಬವರು ನನ್ನನ್ನು ಕರೆದು ” ಸಂಜೆ ಸುಧೀರನಿಗೆ ಮಸೂದನು ತಾಗಿದ ವಿಷಯದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು ಮಸೂದನು ಸುಧೀರನಿಗೆ ಬಾಟಲ್ ತೋರಿಸಿ ಬೆದರಿಕೆ ಹಾಕಿದ್ದಾನೆ ” ಎಂದೂ, ” ನೀನು ಮಸೂದ್ ನನ್ನು ಕರೆದುಕೊಂಡು ಬಾ. ನಾವು ಮಾತನಾಡಿ ಮುಗಿಸಿಕೊಳ್ಳುವ ” ಎಂದೂ ಹೇಳಿದರು.
ಅದರಂತೆ ನಾನು ಮಸೂದನ ಅಜ್ಜನ ಮನೆಗೆ ಹೋಗಿ ರಾತ್ರಿ ಹನ್ನೊಂದು ಗಂಟೆಗೆ ಮಸೂದನನ್ನು ಮಾತುಕತೆಗೆ ಕರೆದುಕೊಂಡು ಬಂದೆ. ಆ ಸಂದರ್ಭದಲ್ಲಿ ಈ ಮೇಲಿನ ಆರೋಪಿತರೆಲ್ಲ ಸೇರಿ ಏಕಾಏಕಿ ಮಸೂದನಿಗೆ ಹೊಡೆಯಲಾರಂಭಿಸಿದರು. ನಾನು ‘ ಹೊಡೆಯಬೇಡಿ ‘ ಎಂದು ಹೇಳುತ್ತಾ ಮಸೂದನನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡೆ. ಆಗ ದೂಡಾಟವಾಗಿ ನಾನು ಮತ್ತು ಮಸೂದ್ ಇಬ್ಬರೂ ನೆಲಕ್ಕೆ ಬಿದ್ದೆವು. ಬಿದ್ದಲ್ಲಿಗೆ ಅವರು ಕಾಲಲ್ಲಿ ಒದ್ದರು. ಅವರ ಪೈಕಿ ಅಭಿಲಾಷ್ ಎಂಬಾತನು ಅಲ್ಲಿದ್ದ ಖಾಲಿ ಜ್ಯೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದನು. ಆಗ ನಾನು ಮಸೂದನನ್ನು ಓಡಿ ತಪ್ಪಿಸಿಕೊಳ್ಳಲು ತಿಳಿಸಿದೆ. ಆತ ಕತ್ತಲಲ್ಲಿ ಓಡಿ ತಪ್ಪಿಸಿಕೊಂಡನು. ಸ್ವಲ್ಪ ಹೊತ್ತಿನ ಬಳಿಕ ನಾನು ಮತ್ತು ಮನೆಯವರು ಮಸೂದನನ್ನು ಹುಡುಕತೊಡಗಿದೆವು. ರಾತ್ರಿ 1.30 ರ ಸುಮಾರಿಗೆ ಸಮೀಪದ ಅಬೂಬಕರ್ ಎಂಬವರ ಬಾವಿಯ ಬಳಿ ಮಸೂದ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ.ಅಲ್ಲಿಂದ ಅವನನ್ನು ಉಪಚರಿಸಿ ಕಾರಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದೆವು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವಂತೆ ಹೇಳಿದ್ದರಿಂದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ” ಎಂದು ಇಬ್ರಾಹಿಂ ಶಾನಿಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಲಂ 143, 107, 323, 324, 307, 149 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು 8 ಮಂದಿಯನ್ನೂ ಬಂಧಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!