ಆರಂತೋಡು ಹಾಗೂ ಮರ್ಕಂಜ ಗ್ರಾಮದ ಗಡಿಭಾಗದಲ್ಲಿರುವ ಅರಮನೆಗಯ ಎಂಬಲ್ಲಿರುವ ತೂಗು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು ಈ ಭಾಗಕ್ಕೆ ನಿರ್ಮಿಸಬೇಕೆಂಬ ಬೇಡಿಕೆಗೆ ಮೂವತ್ತು ವರ್ಷ ಕಳೆದಿದೆ. ಅರಂತೋಡು -ಪಿಂಡಿಮನೆ – ಮಿತ್ತಡ್ಕ -ಮರ್ಕಂಜ ರಸ್ತೆಯಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಶಾಶ್ವತ ತೂಗು ಸೇತುವೆ ತುರ್ತಾಗಿ ನಿರ್ಮಿಸಬೇಕೆಂದು ಒತ್ತಾಯಿಸಿ ಬೇಡಿಕೆ ಈಡೇರುವವರೆಗೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿ ಬ್ಯಾನರ್ ಅಳವಡಿಸಿದ್ದಾರೆ.
ಅರಮನೆಗಯ ಎಂಬುದು ಪರಿಶಿಷ್ಟ ಪಂಗಡದ ಕಾಲೋನಿಯಾಗಿದ್ದು ಇಲ್ಲಿ ಅನೇಕ ಕುಟುಂಬಗಳು ಹೊಳೆಯ ಎರಡು ಬದಿ ವಾಸಿಸುತಿದ್ದಾರೆ. ಬಲ್ನಾಡು ಹೊಳೆಯ ಎರಡೂ ಬದಿಗಳಲ್ಲಿ ಎರಡೂ ಗ್ರಾಮಗಳ ಗಡಿ ಪ್ರದೇಶಗಳಿವೆ. ತಮ್ಮ ದೈನಂದಿನ ವ್ಯವಹಾರಗಳಾದ ಶಾಲೆ, ಪಡಿತರ ಪಡೆಯುವುದು, ಪಂಚಾಯತ್ ಮತ್ತು ಇತರ ಇಲಾಖೆಗಳ ಕೆಲಸಗಳಿಗೆ, ಪ್ರಮುಖವಾಗಿ ಅನಾರೋಗ್ಯ ಸಮಸ್ಯೆಗಳಿಗೆ ಪ್ರತಿದಿನ ಇಲ್ಲಿನ ನಾಗರಿಕರಿಗೆ ಈ ಹೊಳೆ ದಾಟುವುದು ಅನಿವಾರ್ಯವಾಗಿದೆ. ಮಳೆಗಾಲದಲ್ಲಿ ಪ್ರತಿ ವರ್ಷ ಸುಮಾರು ಏಳೆಂಟು ತಿಂಗಳು ಈ ಹೊಳೆಯು ತುಂಬಿ ಹರಿಯುವ ಕಾರಣ ಇವರು ಮಾನವ ನಿರ್ಮಿತ ತೂಗು ಸೇತುವೆಯಲ್ಲಿ ಸರ್ಕಸ್ ಮಾಡಬೇಕಾಗಿದೆ. ಇದರಲ್ಲಿ ಮಕ್ಕಳು ವಯಸ್ಕರು, ಅನಾರೋಗ್ಯ ಪೀಡಿತರು ಸಾಗುವುದು ಅಸಾಧ್ಯ ಅರಂತೋಡು -ಮಿತ್ತಡ್ಕ – ಮರ್ಕಂಜ ಹಾಗೂ ದೊಡ್ಡತೋಟಗಳಿಗೆ ಈ ರಸ್ತೆಯು ಅತೀ ಹತ್ತಿರದ ಸಂಪರ್ಕ ರಸ್ತೆಯಾಗಿರುವ ಕಾರಣ ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇಲ್ಲಿ ಸೇತುವೆ ನಿರ್ಮಿಸಲು ಹಲವಾರು ವರ್ಷಗಳಿಂದ ಸ್ಥಳೀಯ ನಿವಾಸಿಗಳು ಹಾಗೂ ಸ್ಥಳೀಯ ಜನಪ್ರತಿನಿದಿನಗಳು ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿ ಸುಮಾರು 20 ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ವತಿಯಿಂದ ನೀಡಿದ ರೋಪ್ ಅನ್ನು ಹೊಳೆಯ ಎರಡು ಬದಿ ಇರುವ ಮರಕ್ಕೆ ಕಟ್ಟಿ ನಡೆದಾಡುವಲ್ಲಿ ಅಡಿಕೆ ಮರ ಸಲಾಕೆ ಬಳಸಿ ಪಾಲ ನಿರ್ಮಿಸಿದ್ದಾರೆ. ಹಾಗೂ ಪ್ರತಿ ವರ್ಷ ಕೂಡ ದುರಸ್ತಿ ಮಾಡುತ್ತಾರೆ. ದುರಸ್ತಿಗೆ ಸ್ಥಳೀಯ ಗ್ರಾಮ ಪಂಚಾಯತ್ ನೀಡುವ ಅಲ್ಪ ಮೊತ್ತದ ಅನುದಾನ ಬಳಸಿಕೊಂಡು ಸ್ಥಳೀಯರೇ ಪಾಲ ನಿರ್ಮಿಸುತ್ತಾರೆ. ಮರದ ಬೆಳವಣಿಗೆಯಿಂದ ಅದಕ್ಕೆ ಕಟ್ಟಿದ ರೋಪ್ ಶಿಥಿಲವಾಗಿದೆ. ಯಾವಾಗ ತುಂಡಾಗಿ ಬೀಳುತ್ತದೋ ಎಂಬಂತೆ ಇದೆ.
ಸೇತುವೆ ನಿರ್ಮಿಸಲು ಜಾಗ ನೀಡುತ್ತೇನೆ ಎಂದರು ಜನಪ್ರತಿನಿಧಿಗಳು ಪ್ರಯತ್ನ ಮಾಡುತ್ತಿಲ್ಲ. ಶಾಲಾ ಮಕ್ಕಳನ್ನು ಜತೆಗಿದ್ದೆ ಪಾಲ ದಾಟಿಸಬೇಕಾದ ಪರಿಸ್ಥಿತಿ ಇದೆ. ಓಟು ಕೇಳಲೂ ಮಾತ್ರ ಬರುತ್ತಾರೆ. ಶಾಸಕರು ಮೂವತ್ತು ವರ್ಷದಿಂದ ನಮ್ಮ ಪರಿಸ್ಥಿತಿ ನೋಡಲು ಬರಲಿಲ್ಲ. ಬಂದಿದ್ದರೇ ನಮ್ಮ ಕಷ್ಟ ಅರಿವಾಗುತ್ತಿತ್ತು. ಇನ್ನಾದರೂ ಸೇತುವೆ ಅಥವಾ ಸುಸಜ್ಜಿತ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ನಾಗರಿಕರು ಬೇಡಿಕೆಯಿರಿಸಿದ್ದಾರೆ.