ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ ಹಾಗೂ ತಾಲೂಕು ಮಟ್ಟದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದ ಕುರಿತು ಜು.16ರಂದು ಪತ್ರಿಕಾ ಗೋಷ್ಠಿ ನಡೆಯಿತು.
ಗೋಷ್ಠಿಯಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಾ ಕೋಲ್ಚಾರ್ ಮಾತನಾಡಿ ರಾಜ್ಯ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ, ಸುಳ್ಯದ ಗೌಡರ ಯುವಸೇವಾ ಸಂಘ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಸುಳ್ಯ, ಎಂ.ಜಿ.ಎಂ, ಶಿಕ್ಷಣ ಸಂಸ್ಥೆಗಳು ಕೊಡಿಯಾಲಬೈಲು, ಉಬರಡ್ಕ ಮಿತ್ತೂರು ಗ್ರಾಮ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಜುಲೈ 24ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲುವಿನಲ್ಲಿ ಏರ್ಪಡಿಸಲಾಗುವುದು ಎಂದರು.
ಕೆಂಪೇಗೌಡ ಜಯಂತಿ ಪ್ರಯುಕ್ತ ಈಗಾಗಲೇ ಸುಳ್ಯ ತಾಲೂಕು ವ್ಯಾಪ್ತಿಯ ಹೈಸ್ಕೂಲು ವಿದ್ಯಾರ್ಥಿಗಳಿಗೆ ಕೆಂಪೇಗೌಡರು ಕುದುರೆ ಮೇಲೆ ಕುಳಿತಿರುವ ಚಿತ್ರ ಬಿಡಿಸುವ ಸ್ಪರ್ಧೆ, ಪಿ.ಯು.ಸಿ. ಹಾಗೂ ತದನಂತರ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ವ್ಯಕ್ತಿತ್ವ ಮತ್ತು ಬೆಂಗಳೂರು ಕಟ್ಟಿದ ಇತಿಹಾಸದ ಬಗ್ಗೆ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈಗಾಗಲೇ ಶಾಲಾ ಕಾಲೇಜುಗಳಿಗೆ ಮಾಹಿತಿಯನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಈಗಿನ ಬೆಂಗಳೂರನ್ನು ಆಗಿನ ಕೆಂಪೇಗೌಡರು ಯಾವ ರೀತಿ ರೂಪಿಸಿದ್ದರು ಎಂಬ ಅರಿವು ಮೂಡಿಸುವ ಉದ್ದೇಶದಿಂದ ಇತಿಹಾಸವನ್ನು ಕೆದಕಿ ನೋಡುವ ಹವ್ಯಾಸ ಬೆಳೆಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ನಾಡಪ್ರಭು ಕೆಂಪೇಗೌಡರು ಸಮಾಜದ ಎಲ್ಲಾ ವರ್ಗದವರನ್ನು, ಜಾತಿಯವರನ್ನು ಅವರವರ ಸ್ವಉದ್ಯೋಗಕ್ಕೆ ಪ್ರೇರಣೆ ನೀಡಿ ಬೆಳೆಸಿದವರು. ಅದಕ್ಕಾಗಿ ಅವರ ಹೆಸರಿನಲ್ಲಿ ಸುಳ್ಯ ತಾಲೂಕು ಮಟ್ಟದ ಕೆಂಪೇಗೌಡರ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಪ್ರಥಮ ಬಾರಿಗೆ ತನ್ನ ಹಿರಿಯರಿಂದಲೇ ಬಂದಿರುವ ಸಾಮಾಜಿಕ ಸೇವೆಯ ಕೈಂಕರ್ಯವನ್ನು ಮುಂದುವರಿಸಿಕೊಂಡು ಬಂದಿರುವ, ಶೈಕ್ಷಣಿಕ, ಸಂಘಟನೆ, ಧಾರ್ಮಿಕ, ಸಾಹಿತ್ಯ ರಾಜಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅರ್ಪಣಾ ಮನೋಭಾವದಿಂದ ಸಮಚಿತ್ತರಾಗಿ ಸೇವೆ ಸಲ್ಲಿಸುತ್ತಿರುವ ಜಾಕೆ ಮಾಧವ ಗೌಡರವರನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದೇವೆ ಎಂದರು.
ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ.ಯವರು ಉದ್ಘಾಟನೆ ನೆರವೇರಿಸಿ, ಜಾಕೆ ಮಾಧವ ಗೌಡರವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಯಂತಿ ಆಚರಣೆ ಅಂಗವಾಗಿ ಪುತ್ತೂರಿನ ನಿವೃತ್ತ ಉಪನ್ಯಾಸಕಿ ಶ್ರೀಮತಿ ವಾರಿಜಾ ಬೆಳ್ಯಪ್ಪರವರು ವಿಶೇಷ ಮಾತಿನ ಮೂಲಕ ಕೆಂಪೇಗೌಡರ ಬಗ್ಗೆ ಅಭಿಪ್ರಾಯ ಮಂಡಿಸಲಿದ್ದಾರೆ. ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ದಾರ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸುಳ್ಯದ ಪ್ರಪಥಮ ಛಾಯಾಗ್ರಾಹಕರು ಹಾಗೂ ಇತ್ತೀಚೆಗೆ ರಾಜ್ಯಮಟ್ಟದ ಛಾಯಸಾಧಕ ಪ್ರಶಸ್ತಿ ಪುರಸ್ಕೃತರಾದ ಕೆ.ಎಸ್, ಗೋಪಾಕೃಷ್ಣರವರನ್ನು ಅಭಿನಂದಿಸಲಾಗುವುದು. ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಸಂಘದಿಂದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರವನ್ನು ಸಂಘದ ಪೂರ್ವಾಧ್ಯಕ್ಷರುಗಳಾದ ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ, ಎ.ವಿ. ತೀರ್ಥರಾಮ, ಮೋಹನ್‌ರಾಂ ಸುಳ್ಳಿ ವಿತರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಜತ್ ಅಡ್ಕಾರು, ಬೆಳ್ಯಪ್ಪ ಗೌಡ ಬಳ್ಳಡ್ಕ, ದೊಡ್ಡಣ್ಣ ಬರೆಮೇಲು, ಸದಾನಂದ ಮಾವಾಜಿ,ಕೆ.ಟಿ.ವಿಶ್ವನಾಥ್ ಉಪಸ್ಥಿತರಿದ್ದರು.