ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಜು.14ರಂದು ವಿಜೃಂಭಣೆಯಿಂದ ಜರುಗಿತು.
ಶಾಲಾ ಆಡಳಿತ ಮಂಡಳಿಯ ಸಂಚಾಲಕರಾಗಿರುವ ಶ್ರೀಯುತ ರಾಧಾಕೃಷ್ಣ ಬೊಳ್ಳೂರುರವರು ಪ್ರಾಸ್ತಾವಿಕ ನುಡಿಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಸಚಿವರಾದ ಶ್ರೀಯುತ ಎಸ್ ಅಂಗಾರ ಅವರು ವಹಿಸಿಕೊಂಡು ಮಾತನಾಡಿ, ಈ ಊರಿನಲ್ಲಿ ಆರಂಭವಾದ ಈ ಶಾಲೆಯ ಹೆಗ್ಗಳಿಕೆಯ ಗುರುತು ಅಳಿಯದಂತೆ ಬೆಳೆಸಬೇಕು, ನವೀನ ಮಾದರಿಯ ಶೈಕ್ಷಣಿಕ ಚಟುವಟಿಕೆ ಜೊತೆ ವಿದ್ಯಾರ್ಥಿಗಳ ಏಳಿಗೆ ಪ್ರಗತಿ ಸಾಧಿಸಬೇಕು ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೇದಿಕೆಯನ್ನು ಅಲಂಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ಮಹಾದೇವ ಎಸ್ ಪಿ ಮಾತನಾಡಿ, ಶಾಲೆ ಇತಿಹಾಸವನ್ನು ಮೆಲುಕು ಹಾಕಿದಾಗ ಈ ಶಾಲೆಗೆ ಇದ್ದ ಹೆಸರು ಇನ್ನು ಅಜರಾಮರವಾಗಿದೆ, ವಿದ್ಯಾಭ್ಯಾಸ ಕೊಡುವುದರ ಜೊತೆಗೆ ಸಮುದಾಯದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದಂತಹ ಈ ಶಾಲೆಯು ಅಭಿವೃದ್ಧಿಯ ದಾಪುಗಾಲು ಹಾಕಲಿ ಎಂದು ಮಾತನಾಡಿದರು.
ಹಾಗೆಯೇ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಯುತ ಆನೇಕಾರ ಗಣಪಯ್ಯ ಅವರು, ಈ ಶಾಲೆಗೆ ಊರಿನಲ್ಲಿ ಇದ್ದ ಎಲ್ಲಾ ಮಹನೀಯರ ಕೊಡುಗೆ ಇದೆ ಜನರ ಆಸಕ್ತಿಯ ಜೊತೆಗೆ ಶಿಕ್ಷಣ ಪ್ರೇಮಿಗಳ ಕೋರಿಕೆಯ ಮೇರೆಗೆ ಹುಟ್ಟಿಕೊಂಡಂತಹ ಈ ಶಾಲೆಯು ಉತ್ತಮ ವಿದ್ಯಾಭ್ಯಾಸವನ್ನು ಕೊಡುವುದರ ಜೊತೆಗೆ 50 ವರ್ಷಗಳತ್ತ ಮುನ್ನಡೆಯುವ ಈ ಸಂದರ್ಭದಲ್ಲಿ ಈ ಶಾಲೆಗೆ ದುಡಿದವರ ಬೆವರು ಸುರಿಸಿದ ಹಿರಿಯ ಚೇತನಗಳನ್ನು ನೆನಪಿಸಬೇಕಾದ ಸಂದರ್ಭ ಇದಾಗಿದೆ ಎಂದರು ಅವರ ಹಾಕಿಕೊಟ್ಟ ಈ ಶಾಲೆಯ ಹೆಗ್ಗುರುತನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇದೆ ಎಂದು ಹೇಳಿದರು.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ನಿವೃತ್ತ ಶಿಕ್ಷಕರಾದ ಎಂ ಟಿ ಶಾಂತಿಮೂಲೆ ಇವರು ಮಾತನಾಡಿ ಶಾಲೆಯ ಆರಂಭದ ಸಮಯದಲ್ಲಿ ಸುಮಾರು ವರ್ಷಗಳ ಕಾಲ ನಾವೆಲ್ಲರೂ ಉಚಿತವಾಗಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿದ್ದೇವೆ. ಶಾಲೆಯ ಏಳಿಗೆಗಾಗಿ ಅನೇಕ ಶಿಕ್ಷಕರು ಶ್ರಮವನ್ನು ಪಟ್ಟಿದ್ದಾರೆ. ಕರ್ತವ್ಯವನ್ನೇ ಮುಡಿಪಾಗಿಟ್ಟಿದ್ದಾರೆ. ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಶಾಲೆಯು ಫಲಿತಾಂಶದ ಜೊತೆಗೆ ಉತ್ತಮ ಹೆಸರು ಗಳಿಸಿಕೊಂಡಿದೆ ಹಾಗೂ ಶಿಸ್ತನ್ನು ರೂಢಿಸಿಕೊಂಡಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಚೈತ್ರ ಕೆ. ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಾಡಬಾಕಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ತೇಜಸ್ವಿ ಕಡಪಳ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕ ವೃಂದದವರು, ಪೋಷಕರು, ಊರಿನ ವಿದ್ಯಾ ಅಭಿಮಾನಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಇವರು ಕಾರ್ಯಕ್ರಮ ನಿರೂಪಿಸಿದರು.