ಬೆಂಗಳೂರು ಜು.8: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.13ರವರೆಗೆ ಗುಡುಗು, ಗಾಳಿ ಸಹಿತ ಅತೀ ಭಾರಿ ಹಾಗೂ ಭಾರಿ ಮಳೆ ನಿರೀಕ್ಷೆ ಇದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮೂರು ದಿನ ‘ರೆಡ್ ಅಲರ್ಟ್’ ಕೊಡಲಾಗಿದೆ.
ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆ, ವೈಪರಿತ್ಯಗಳ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಅಕ್ಷರಶಃ ತತ್ತರಿಸಿವೆ. ಕಳೆದೊಂದು ವಾರದಿಂದ ಈ ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಪುನಃ ಮತ್ತದೇ ಭಾಗಗಳಲ್ಲಿ ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಕಂಡು ಕರಾವಳಿಗರು ಆತಂಕಕ್ಕೀಡಾಗಿದ್ದಾರೆ.
ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರ ಸಹಿತ ಜು.10ರವರೆಗೆ ಗುಡುಗು ಸಹಿತ ಅತ್ಯಧಿಕ ಭಾರಿ ಮಳೆ ಬರಲಿರುವುದರಿಂದ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಅಂದರೆ ಈ ಮೂರು ದಿನ ಈ ಜಿಲ್ಲೆಗಳ ಹಲವೆಡೆ 20ಸೆಂ.ಮೀ.ಗಿಂತಲೂ ಅಧಿಕ ಮಳೆ ಸುರಿಯಬಹುದು ಎಂದು ನಿರೀಕ್ಷಿಸಲಾಗಿದೆ. ನಂತರ ಜು.13ರವರೆಗೆ ಭಾರಿ ಮಳೆಯ ಕಾರಣಕ್ಕೆ ಅದೇ ಮೂರು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.