



ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ಗುಳಿಕ್ಕಾನದ ಗುಡ್ಡದಲ್ಲಿ 2018 ರಲ್ಲಿ ಭೂಮಿ ಆಳವಾಗಿ ಬಿರುಕು ಬಿಟ್ಟಿತು. ಆ ಸಂದರ್ಭದಲ್ಲಿ ಗುಳಿಕ್ಕಾನದ ಗುಡ್ಡದ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು. ಅಲ್ಲಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿ 4 ವರ್ಷಗಳಾದರೂ ಈವರೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುಳಿಕ್ಕಾನ ಪ್ರದೇಶ ಜನರ ವಾಸಕ್ಕೆ ಯೋಗ್ಯವಾಗಿದೆಯೇ ಎಂದು ತಿಳಿಯಲು ಜುಲೈ 03 ರಂದು ಭೂ ವಿಜ್ಞಾನಿಗಳು ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯವರು ಜೊತೆಗಿದ್ದರು.
ತಂಡವು 2018 ರಲ್ಲಿ ಬಿರುಕು ಬಿಟ್ಟಿದ್ದ ಗುಡ್ಡದ ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿತು. ಹಾಗೂ ಭೂ ಕುಸಿತ ಇತ್ಯಾದಿ ಪ್ರಾಕೃತಿಕ ವಿಕೋಪಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಯಿತು. ಅಧಿಕಾರಿಗಳ ತಂಡ ಅಧ್ಯಯನ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಿದೆ.
ಈ ಸಂದರ್ಭದಲ್ಲಿ ಭೂ ವಿಜ್ಞಾನಿಗಳು, ಗಣಿ ಇಲಾಖೆಯ ಅಧಿಕಾರಿಗಳ ಜೊತೆಗೆ ಉಪ ತಹಶೀಲ್ದಾರ್ ಚಂದ್ರಕಾಂತ್, ಆರ್.ಐ ಶಂಕರ್, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಕೊಲ್ಲಮೊಗ್ರು ಗ್ರಾಮ ಲೆಕ್ಕಾಧಿಕಾರಿ ಮಧು ಕುಮಾರ್, ಸಹಾಯಕ ಯತಿನ್, ಗ್ರಾಮ ಪಂಚಾಯತ್ ಸಿಬ್ಬಂದಿ ಸಂತೋಷ್, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.