Ad Widget

ಇಂದು ವಿಶ್ವ ಪರಿಸರ ದಿನ ;ಪ್ರಕೃತಿಯೊಂದಿಗೆ ಸಾಮರಸ್ಯಕ್ಕಾಗಿ ಇರುವುದು ಒಂದೇ ಒಂದು ಭೂಮಿ

ಜೂನ್ 5 ವಿಶ್ವ ಪರಿಸರ ದಿನ ಮನುಷ್ಯನ ಉಸಿರಾಗಿರುವ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯು ಪ್ರತೀ ವರ್ಷ ಒಂದೊಂದು ಧ್ಯೇಯವಾಕ್ಯವನ್ನು ಇಟ್ಟುಕೊಂಡು 1974 ರಿಂದ ಪರಿಸರ ದಿನವನ್ನು ಆಚರಿಸುತ್ತಿದೆ. ಮೊದಲ ಬಾರಿಗೆ ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ಪರಿಸರ ಸಮಸ್ಯೆ, ವನ್ಯಜೀವಿ ಅಪರಾಧದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭವಾದ ದಿನಾಚರಣೆ ಇಂದು ಸಾರ್ವಜನಿಕರಿಗೂ ತಲುಪುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ.

     ಪ್ರಸ್ತುತ ವರ್ಷ "ಒಂದೇ ಒಂದು ಭೂಮಿ" ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು, ಭೂಮಿ ನಮಗೆ ತಾಯಿ ಇದ್ದ ಹಾಗೆ, ಆ ಭೂಮಿತಾಯಿಯನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಜನತೆಗೆ ನೀಡಿದೆ.  ಭೂಮಿ ತಾಯಿಯನ್ನು ತಾಳ್ಮೆಯ ಪ್ರತಿರೂಪ ಎನ್ನುತ್ತಾರೆ. ಅದೇ ತಾಳ್ಮೆಯಿಂದ, ಶಾಂತರೂಪಿಯಾಗಿದ್ದ ಭೂಮಿತಾಯಿಯ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆದರೆ ಆಕೆ ತಾಳ್ಮೆಗೆಟ್ಟು ತನ್ನ ನಿಜರೂಪವನ್ನು ತೋರಿಸಿದ್ದೇ ಆದಲ್ಲಿ ಅದರಿಂದಾಗುವ ಪರಿಣಾಮ ಘೋರವಾಗಿರುತ್ತದೆ.  ಆ ನಿಟ್ಟಿನಲ್ಲಿ ನಾವೆಲ್ಲರೂ ವಾಸಿಸುವ ಈ  ಭೂಮಿಯನ್ನು ಸುಸ್ಥಿರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯ. ಈ ಭೂಮಿಯ ಮೇಲೆ ಮಾನವನೇ ಹುಟ್ಟುಹಾಕಿದ ಬೇರೆ ಬೇರೆ ಜಾತಿ, ಮತ, ಧರ್ಮ, ಮೇಲ್ವರ್ಗ, ಕೆಳವರ್ಗದ ಜನರಿರಬಹುದು, ಪ್ರಾಣಿ-ಪಕ್ಷಿಗಳು, ಗಿಡಮರಗಳು ಜಲಚರ ಜೀವಿಗಳು, ಕ್ರಿಮಿಕೀಟಗಳು ಇರಬಹುದು. ಇವುಗಳೆಲ್ಲವೂ ಇರುವುದು ಒಂದೇ ಒಂದು ಭೂಮಿಯಲ್ಲಿ. ಎಲ್ಲೂ ಕೂಡ ವರ್ಗಬೇಧ, ಜಾತಿ - ಮತಕ್ಕೆ ತಕ್ಕನಾಗಿ ಬೇರೆ ಬೇರೆ ಭೂಮಿಗಳಿಲ್ಲ. ಹೀಗಿರುವಾಗ ಎಲ್ಲರಿಗಾಗಿ,  ಎಲ್ಲವುಗಳಿಗಾಗಿ ಇರುವ ಈ ಒಂದೇ ಒಂದು ಭೂಮಿಯ ಸಂರಕ್ಷಣೆ ಪ್ರತಿಯೊಬ್ಬ ಮಾನವನ ಹೊಣೆ. ಹಾಗಾಗಿ ಸಾಮರಸ್ಯದಿಂದ ನಮ್ಮ ಇಂದಿನ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ. 

     ಮನುಷ್ಯ ಆಧುನಿಕತೆಗೆ ತೆರೆದುಕೊಂಡಂತೆ ಪರಿಸರದ ಬಗ್ಗೆ ಕಾಳಜಿ ವಹಿಸುವುದನ್ನು ಕಡಿಮೆ ಮಾಡಿದ್ದಾನೆ. ಪರಿಸರವನ್ನು ಸ್ವಚ್ಛ ಮಾಡಲು ಇನ್ಯಾರೋ ಹೇಳಬೇಕಾದ ಮನಸ್ಥಿತಿ. ಹೆಚ್ಚೆಚ್ಚು ಸುಶಿಕ್ಷಿತರಾಗುತ್ತಾ ಹೋದ ಹಾಗೆ ಮೌಲ್ಯಗಳ ಕುಸಿತ. ಇದರಿಂದಾಗಿ ಪರಿಸರ ಸಂರಕ್ಷಣೆಗಾಗಿ "ಪ್ರಜ್ಞಾವಂತ ನಾಗರಿಕರು ಇಲ್ಲಿ ಕಸ ಹಾಕಬಾರದು" "ತಿಳಿದವರು ಇಲ್ಲಿ ಕಸ ಎಸೆಯಬಾರದು" ಎಂಬೆಲ್ಲ ಪೋಸ್ಟರುಗಳನ್ನು ಹಾಕಬೇಕಾದಂತಹ ಪರಿಸ್ಥಿತಿ. ದೇಶದ ಪ್ರಧಾನಿಯವರು ಕಸಬರಿಕೆ ಹಿಡಿದು ದೇಶವನ್ನು ಸ್ವಚ್ಛಗೊಳಿಸಿ ಎಂದು ಹೇಳಬೇಕಾದ ಸ್ಥಿತಿ ಬಂದುದು ವಿಪರ್ಯಾಸವೇ ಸರಿ.

      ಪರಿಸರ ಉಳಿದರೆ ನಾವು ಉಳಿದಂತೆ, ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಜೀವನ ಸ್ವಸ್ಥ ವಾದಂತೆ. ಕುವೆಂಪುರವರು ಅಂದು ಹೇಳಿದ, "ಹಸಿರತ್ತಲ್,  ಹಸಿರಿತ್ತಲ್,  ಹಸಿರೆತ್ತಲ್, ಹಸಿರ್ಗಟ್ಟಿತ್ತು  ಮನಸ್ಸು" ಎಂಬ ಭಾವನೆ ಪ್ರತಿಯೊಬ್ಬ ಜನತೆಯಲ್ಲಿ ಬರಬೇಕಾಗಿದೆ. ಅರಣ್ಯೀಕರಣ ಹೋಗಿ ಕಾಂಕ್ರಿಟೀಕರಣ ಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಸಿರು ದೂರವಾಗುತ್ತಿದೆ. ಮನುಷ್ಯ ಇವತ್ತು ತಾನು ಬೆಳೆಯುವ ನೆಪದಲ್ಲಿ ಪ್ರಕೃತಿಯ ಬಗ್ಗೆ ಚಿಂತನೆ ಮಾಡುವುದನ್ನೇ ಮರೆತು ಬಿಟ್ಟಿದ್ದಾನೆ.

     ಮನುಷ್ಯನ ನೆರಳು ಮತ್ತು ಉಸಿರಾಗಿರುವ, ಆಮ್ಲಜನಕದ ಮೂಲವಾಗಿರುವ,  ಆರೋಗ್ಯದ ಮಡಿಲಾಗಿರುವ, ನೆಮ್ಮದಿಯ ಜೀವನದ ಒಡನಾಡಿಯಾಗಿರುವ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಮರೆತು, ಮನುಷ್ಯ ಹಾಗೂ ಜೀವಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸದೇ ಎಲ್ಲೆಂದರಲ್ಲಿ ಮಾಲಿನ್ಯ, ಪ್ಲಾಸ್ಟಿಕ್, ಕಸದ ರಾಶಿಗಳು ರಾರಾಜಿಸುವುದನ್ನು ಕಾಣುತ್ತೇವೆ.  ಭೂಮಿಯನ್ನು ಸಂರಕ್ಷಿಸುವ ನೆಪದಲ್ಲಿ ಭಾಷಣಗಳನ್ನು ಬಿಗಿಯುವುದು, ಮಾಧ್ಯಮಗಳಲ್ಲಿ ಸಂದೇಶ ರವಾನೆ ಮಾಡಿ ಸೈ ಎನಿಸಿಕೊಳ್ಳುವುದು, ಲೈಕ್, ಕಮೆಂಟ್, ಶೇರ್ ಗಳನ್ನು ಬಿಟ್ಟರೆ ನಮ್ಮ ಪರಿಸರ ಸ್ವಚ್ಛ ಆಗಲೇ ಇಲ್ಲ. 

      ಹಾಗಾದರೆ ಪರಿಸರ ಸ್ವಚ್ಛತೆ ಸಾಧ್ಯವಿಲ್ಲವೇ? ಇರುವ ನಮ್ಮ ಈ ಒಂದು  ಭೂಮಿಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗೆ ಇರುವ  ಒಂದೇ ಒಂದು ಉತ್ತರ "ಮನಸ್ಸು". ಹೌದು ನಮ್ಮ ಮನಸ್ಸನ್ನು ಮೊದಲು ಸ್ವಚ್ಛಗೊಳಿಸಿಕೊಂಡರೆ,  ಎಲ್ಲೆಂದರಲ್ಲಿ ಕಸ ಎಸೆಯಬಾರದು, ಪ್ರಕೃತಿ ನಾಶ ಮಾಡಬಾರದು ಎಂಬ ಮನಸ್ಥಿತಿ ಪ್ರತಿಯೊಬ್ಬನಿಗೂ ಬಂದದ್ದೇ ಆದಲ್ಲಿ ಮುಂದಿನ ಪೀಳಿಗೆಗೆ ಸುಂದರವಾದ ಪರಿಸರವನ್ನು ದಾಟಿಸಲು ಸಾಧ್ಯವಿದೆ. ಇಲ್ಲವಾದಲ್ಲಿ ಜೂನ್ 5 ಒಂದು ದಿನಕ್ಕೆ ಮಾತ್ರ ಗಿಡನೆಡುವುದು, ಬೀಜ ಬಿತ್ತುವುದು,  ಪರಿಸರ ಸ್ವಚ್ಛ ಮಾಡುವುದು ಮೊದಲಾದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿ ಇರುವ ಒಂದು  ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ಮುಂದೊಂದು ದಿನ ಬರಬಹುದೇನೋ ಎಂಬ ದೀರ್ಘ ನಿಟ್ಟುಸಿರನ್ನು ಬಿಡಬೇಕಾಗುವುದು. ಆದ್ದರಿಂದ ಯಾವುದು ಅಳಿವಿನಂಚಿನಲ್ಲಿದೆಯೋ ಅದಕ್ಕೆ ಒಂದು ದಿನವನ್ನು ಇಟ್ಟು ಆ ದಿನಕ್ಕೆ ಸೀಮಿತಗೊಳಿಸದೇ ವರ್ಷವಿಡೀ ನಮ್ಮ ಸುತ್ತಮುತ್ತಲ ಪರಿಸರವನ್ನು ರಕ್ಷಿಸಿ ಮಾನವನ ಉಸಿರು ಮತ್ತು ಭವಿಷ್ಯವನ್ನು ರಕ್ಷಿಸೋಣ.  ಎಷ್ಟೇ ಎತ್ತರಕ್ಕೆ ಬೆಳೆದರೂ,  ಶ್ರೀಮಂತಿಕೆಯಿಂದ ಮೆರೆದರೂ ಇರಬೇಕಾದುದು ಇರುವ ಒಂದೇ ಒಂದು ಭೂಮಿಯಲ್ಲಿ ಎಂದು ಎಲ್ಲವನ್ನೂ ಎಲ್ಲರನ್ನೂ

ಬದುಕಲು ಬಿಡೋಣ.
ಹಸಿರೇ ಉಸಿರು

🖋️ ಡಾ. ಅನುರಾಧಾ ಕುರುಂಜಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!