ಬಳ್ಪ ಮತ್ತು ಕೇನ್ಯ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತು
ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ
ಪುನರ್‌ಪ್ರತಿಷ್ಠಾ ಮಹೋತ್ಸವ 2022 ಜನವರಿ 17 ಸೋಮವಾರದಂದು ಪೂರ್ವಾಹ್ನ 08-45ರ ಮೀನ ಲಗೃದ ಶುಭ ಮುಹೂರ್ತದಲ್ಲಿ
ಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರ
ನೇತೃತ್ವದಲ್ಲಿ ವಿವಿಧ ತಾಂತ್ರಿಕ ವೈದಿಕ ವಿಧಿವಿಧಾನಗಳೊಂದಿಗೆ ಜರಗಲಿದೆ. ಜನವರಿ 16 ರಿಂದ ಆರಂಭಗೊಂಡು ಜ. 20 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಿಶೋರ್ ರೈ ಕೊಂಡೆಬಾಯಿ, ಗೌರವಾಧ್ಯಕ್ಷರಾಗಿ ರವಿ ಅಮ್ಮಣ್ಣಾಯ ಕಣ್ಕಲ್ ಬೀಡು,
ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ರೈ ಗೆಜ್ಜೆ, ಕಾರ್ಯದರ್ಶಿ ವೆಂಕಪ್ಪ ಗೌಡ ಅರ್ಗುಡಿ, ಕೋಶಾಧಿಕಾರಿಯಾಗಿ ಆನಂದ ಗೌಡ ಕಣ್ಕಲ್ ಕಾರ್ಯನಿರ್ವಹಿಸುತ್ತಿದ್ದಾರೆ.
ಹಿನ್ನೆಲೆ :
ಪರಶುರಾಮನ ಸೃಷ್ಟಿಯಲ್ಲಿ ತುಳುನಾಡೆಂದು ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆ, ದೈವ ದೇವರುಗಳು ನೆಲೆ ನಿಂತಿರುವ
ಪುಣ್ಯ ಭೂಮಿ ಕಡಬ ತಾಲೂಕಿನ ಬಳ್ಪ ಗ್ರಾಮ. ಈ ಪಂಚಾಯತಿಗೆ ಒಳಪಟ್ಟ ಬಳ್ಪ ಮತ್ತು ಕೇನ್ಯ ಗ್ರಾಮಗಳಲ್ಲಿ ಸುಮಾರು
ಅರು ದೇವಸ್ಥಾನಗಳು ಮಾತ್ರವಲ್ಲದೇ ಸೀಮೆ ದೇವರಾದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸೇರಿ ಏಳು ದೇವಸ್ಥಾನಗಳಲ್ಲಿ
ದೇವರುಗಳು ನೆಲೆಗೊಂಡಿದ್ದು, ಅವುಗಳೆಲ್ಲ ಊರ ಹಾಗೂ ಪರವೂರ ಭಕ್ತಾಭಿಮಾನಿಗಳ ಸಹಕಾರದಿಂದ ಜೀರ್ಣೋದ್ಧಾರಗೊಂಡು ದೇವರ ನಾಡೆಂದು ಪ್ರಸಿದ್ಧಿ ಪಡೆದಿದೆ. ಹೀಗೆ ದೈವಜ್ಞರ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಈ ಎಲ್ಲಾ ದೇವಸ್ಥಾನಗಳಿಗೂ
ವಿಶೇಷ ಸಂಬಂಧ ಕಲ್ಪಿಸಿಕೊಂಡಿರುವ ಬಳ್ಪ ಮತ್ತು ಕೇನ್ಯ ಗ್ರಾಮಗಳ ಗಡಿಭಾಗದ ನೇರ್ಪು ಮಾಲ್ಯ ಸುಮಾರು 800 ವರ್ಷಗಳ
ಇತಿಹಾಸವುಳ್ಳ ಆಗಿನ ಅರಸರ ಆಳ್ವಿಕೆಯ ಕಾಲದಲ್ಲಿ ಗ್ರಾಮ ದೈವವಾಗಿ ನೆಲೆನಿಂತ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ
ರಾಜನ್ ದೈವದ ದೈವಸ್ಥಾನವಿದೆ. ಈ ದೈವಸ್ಥಾನವು ಹಿಂದೆ ಸಿದ್ದಪ್ಪ ಅರಸರ ಆಡಳಿತದಲ್ಲಿದ್ದು, ಇವರಿಗೆ ಮಕ್ಕಳಿಲ್ಲದ ಕಾರಣ
ಕಾರಿಂಜ ಎಂಬಲ್ಲಿಯ ಒಂದು ಗೌಡ ಮನೆತನದವರನ್ನು ಕರೆಯಿಸಿಕೊಂಡು ಈ ದೈವಸ್ಥಾನದ ಆಡಳಿತವನ್ನು ಅವರಿಗೆ
ನೀಡಿದರು. ಈ ಕಾರಿಂಜ ಎಂಬ ಹೆಸರು ಮುಂದೆ ಬದಲಾಗಿ ಕಾರ್ಜ ಎಂದು ಪ್ರಚಲಿತವಾಗಿದೆ ಎನ್ನಲಾಗಿದೆ. ಈ ದೈವಸ್ಥಾನಕ್ಕೆ ಕಣ್ಕಲ್ ಬೂಡು ಮನೆತನಕ್ಕೂ ಬಂಟರಗುತ್ತು ಮನೆತನಕ್ಕೂ ಅಲ್ಲದೇ ಗೆಜ್ಜೆ, ಕಣ್ಕಲ್, ಬಡ್ಡಕೋಟಿ ಮೊದಲಾದ ಗೌಡ ಮನೆತನದವರಿಗೂ
ವಿಶೇಷ ಸಂಬಂಧವಿರುವುದು ತಿಳಿದು ಬಂದಿದೆ. ಈ ದೈವಸ್ಥಾನದಲ್ಲಿ ಈರ್ವರ್ ಉಳ್ಳಾಕುಲು ಮತ್ತು ಶಿರಾಡಿ ರಾಜನ್ ದೈವ
ಹಾಗೂ ಪರಿವಾರ ದೈವಗಳು ನೆಲೆನಿಂತಿರುವುದಲ್ಲದೆ ಇದಕ್ಕೆ ಸಂಬಂಧಪಟ್ಟ ನಾಗದೇವರ ಸಾನಿಧ್ಯವೂ ಈ ಭೂಮಿಯಲ್ಲಿರುವುದು
ಕಂಡು ಬಂದಿದೆ. ಇದೀಗ ಕರ್ನಾಟಕ ಘನ ಸರಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೊಳಪಟ್ಟಿರುತ್ತದೆ.
ಮಕರ ಮಾಸ ಹುಣ್ಣಿಮೆಯ ಸಮಯ ಹಿಂದಿನ ಅರಸರ ಕಾಲದಿಂದಲೂ ಮೂರು ದಿನಗಳ ಕಾಲ ಸತತವಾಗಿ ಇಲ್ಲಿ ಜಾತ್ರೆ
ನಡೆಯುತ್ತಾ ಬರುತ್ತಿತ್ತು. ಆಗ ಕಾರ್ಜ, ಗೆಜ್ಜೆ, ಕಣ್ಕಲ್, ಪೋಲೆ, ಬಡ್ಡಕೋಟಿ ಹಾಗೂ ನೇರ್ಪು ಮನೆತನದವರಿಗೆ ಈ ದೈವಗಳ
ಚಾಕರಿ ಮಾಡಲು ಹಕ್ಕು ಇತ್ತು ಎಂದು ತಿಳಿದು ಬಂದಿದೆ. ಅಲ್ಲದೇ ವಿಶ್ವಕರ್ಮರು, ಮಡಿವಾಳರು, ಅಜಲಾಯರು, ಪರವರು,
ಮುಗೇರರು (ಕಾಪ), ಗಾಣಿಗರು ಮೊದಲಾದ ಹಲವಾರು ಸಮುದಾಯದವರಿಗೂ ಹಕ್ಕು ಇರುತ್ತಿತ್ತು ಎಂಬುದು ಕೂಡಾ
ತಿಳಿದು ಬಂದಿರುತ್ತದೆ. ಹೀಗೆ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದ್ದ ಈ ಗ್ರಾಮ ದೈವದ ಸೇವೆ ಕ್ರಮೇಣ ದೈವಸ್ಥಾನದ
ಆಡಳಿತ ಮಾಡುವವರ ಮತ್ತು ಚಾಕರಿ ಮಾಡುತ್ತಿದ್ದ ಪೂಜಾರಿಗಳ, ಮಲೆ ಕುಡಿಯರ, ಗಾಣಿಗರ ಕಾಲ ಗತಿಸಿದ ಹಾಗೆ ಎಲ್ಲವೂ
ವ್ಯತ್ಯಾಸವಾಗುತ್ತಾ ಬಂದಿರುತ್ತದೆ. ಕಾರ್ಣಿಕದ ನೆಲೆಯಾಗಿದ್ದ ಈ ದೈವಸ್ಥಾನದಲ್ಲಿ ನ್ಯಾಯಯುತವಾದ ಹರಿಕೆಗಳಿಂದ ಹಲವಾರು
ಮರಣಗಳು ಸಂಭವಿಸಿ ಆ ಎಲ್ಲಾ ಪ್ರೇತಾತ್ಮಗಳು ದೈವದ ಸಾನಿಧ್ಯದಲ್ಲಿದ್ದು, ಅವುಗಳಿಗೆ ಸದ್ಗತಿ ಸಿಗದಿರುವುದು ಕಂಡು
ಬಂದಿರುತ್ತದೆ. ದೇವ ಕ್ರಿಯೆಯಲ್ಲಿ ನಡೆಯುವ ಶ್ರೀ ಉಳ್ಳಾಕುಲ ಸೇವೆ ಮತ್ತು ಅಸುರ ಕ್ರಿಯೆಯಲ್ಲಿ ನಡೆಯುವ ಶ್ರೀ ರಾಜನ್
ದೈವ ಹಾಗೂ ಪರಿವಾರ ದೈವಗಳು ಒಂದೇ ಮಂಚದಲ್ಲಿ ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರುತ್ತಿರುವ ಕಾರಣ ದೈವಗಳ ಎಲ್ಲಾ
ಸೇವೆಗಳಲ್ಲಿ ವ್ಯತ್ಯಾಸ ಉಂಟಾಗಿ ಕೆಲವು ಅವಘಡಗಳು ಕಂಡು ಬಂದಿರುವುದಲ್ಲದೆ ಊರಿಗೆ ಊರೇ ಹಲವಾರು ಸಮಸ್ಯೆಗಳು
ಮತ್ತು ಅನಗತ್ಯವಾದ ಭಿನ್ನಮತಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಷ್ಟಮಂಗಲ ಚಿಂತನೆ ನಡೆಸಿದಾಗ ದೈವಗಳ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂದು ಕಂಡುಬಂದಿತ್ತು.