ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಂದು ಷಷ್ಠಿ ಮಹೋತ್ಸವ ಆರಂಭಗೊಂಡಿದ್ದು ಡಿ.12 ಆದಿತ್ಯವಾರದ ತನಕ ವೈಭವೋಪೇತವಾಗಿ ಜರುಗಿತು. ಡಿ.08ರಂದು ಪಂಚಮಿ ಪ್ರಯುಕ್ತ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು ಶ್ರೀ ಮಂಜುನಾಥೇಶ್ವರ ಸನ್ನಿಧಿಯಿಂದ ಹೊರೆಕಾಣಿಕೆ ಸ್ವೀಕಾರ ನಡೆಯಿತು. ಡಿ.09ರಂದು ಷಷ್ಠಿ ಮಹೋತ್ಸವ ಪ್ರಯುಕ್ತ ಪೂರ್ವಾಹ್ನ ಮಹಾಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ, ಶತರುದ್ರಾಭಿಷೇಕ, ಪಲ್ಲಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ತಾಯಂಬಕಂ-ನೇರಳತ್ತಾಯ ದೈವದ ಭಂಡಾರ ತೆಗೆಯುವುದು, ಮಹಾಪೂಜೆ, ಶ್ರೀ ಬಲಿ ಉತ್ಸವ, ಪ್ರಸಾದ ವಿತರಣೆ ಬಳಿಕ ನೇರಳತ್ತಾಯ ದೈವದ ನೇಮ ಜರುಗಿತು. ಡಿ.10ರಂದು ಪೂರ್ವಾಹ್ನ ಶುದ್ಧಿ ಕಾರ್ಯಗಳು, ಶ್ರೀ ದೈವ ರಕ್ತೇಶ್ವರಿ ತಂಬಿಲ ಸೇವೆ, ಭಂಡಾರ ತೆಗೆಯುವುದು ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ, ರಂಗಪೂಜೆ, ಶ್ರೀ ರಕ್ತೇಶ್ವರಿ ದೈವದ ನೇಮ ಸೇವೆ ನಡೆಯಿತು.
ಡಿ.11ರಂದು ರಾತ್ರಿ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಉಳ್ಳಾಕುಲು, ಚಾಮುಂಡಿ ದೈವಗಳ ಭಂಡಾರ ತೆಗೆಯುವುದು, ಪ್ರಸಾದ ಭೋಜನ, ಉಳ್ಳಾಕುಲು ದೈವದ ನೇಮ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಕ ಮಂಡಲ ಕಳಂಜ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಶ್ರೀರಾಮ ದರ್ಶನ ಪ್ರದರ್ಶನಗೊಂಡಿತು.
ಡಿ.12ರಂದು ಪೂರ್ವಾಹ್ನ ಚಾಮುಂಡಿ ದೈವದ ನೇಮೋತ್ಸವ, ಗಣಗಳ ನೇಮ ನಡೆದು ಮಧ್ಯಾಹ್ನ ಶ್ರೀ ಸನ್ನಿಧಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯುವುದರೊಂದಿಗೆ ಷಷ್ಠಿ ಮಹೋತ್ಸವ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.