
ಸುಳ್ಯ ನಗರ ಪಂಚಾಯತ್ ನ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ 2.58 ಕೋಟಿ ರೂಪಾಯಿಗಳ ಜಾಕ್ ವೆಲ್ ನಿರ್ಮಾಣ ಕಾಮಗಾರಿಯು ಆರಂಭಗೊಂಡಿದೆ.
ಕಳೆದ ಮಾರ್ಚ್ ನಲ್ಲಿ ಈ ಕಾಮಗಾರಿಯ ಟೆಂಡರ್ ಪೂರ್ಣಗೊಂಡಿದ್ದರೂ ಮಳೆಗಾಲವು ಬೇಗ ಆರಂಭದ ಕಾರಣ ಕಾಮಗಾರಿಯು ಆರಂಭವಾಗಿರಲಿಲ್ಲ. ಇದೀಗ ಕಾಮಗಾರಿಯ ಅರ್ಥ್ ವರ್ಕ್ ಆರಂಭಗೊಂಡಿದ್ದು ತಳಪಾಯದ ಬಂಡೆಯನ್ನು ಒಡೆದು ಹೊಳೆಯ ಮಟ್ಟದಿಂದ ಸುಮಾರು ಆರು ಮೀಟರುಗಳಷ್ಟು ಆಳಕ್ಕೆ ಕೊರೆದು ಈ ಆಯತಾಕೃತಿಯ ಜಾಕ್ವೆಲ್ ನಿರ್ಮಾಣವಾಗಲಿದೆ. ಒಟ್ಟು ಸುಮಾರು 15 ಮೀಟರ್ ಎತ್ತರವಿರುವ ಈ ಜಾಕ್ ವೆಲ್ ನಗರದ ಬಹುಕೋಟಿ ನೀರಿನ ಯೋಜನೆಯ ಭಾಗವಾಗಿದೆ . ಹಿಂದಿನ ನಗರೋತ್ಥಾನ ನಿಧಿಯಿಂದ ಈಗಾಗಲೇ 1.29 ಕೋಟಿ ರುಪಾಯಿ ಇದಕ್ಕೆ ಪಾವತಿಸಲಾಗಿದ್ದು ಬಾಕಿ ನಿಧಿಯನ್ನು ನಗರ ಪಂಚಾಯತ್ ಸಂಪನ್ಮೂಲದಿಂದ ಜೋಡಿಸಬೇಕಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯು ಈ ಕಾಮಗಾರಿಯನ್ನು ನಿರ್ವಹಿಸಲಿದೆ. ನಗರ ಪಂಚಾಯಿತಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ್ ರವರು ಇತ್ತೀಚೆಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಇಂಜಿನಿಯರ್ ಶಿವಕುಮಾರ್, ಕೆ.ಯು.ಡ್ಲ್ಯೂ.ಎಸ್. ಇಂಜಿನಿಯರ್ ಗಣೇಶ್ ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.